Bidar | ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡಿ: ಕರ್ನಾಟಕ ದಲಿತ ಮಹಿಳಾ ಒಕ್ಕೂಟ ಆಗ್ರಹ
ಬೀದರ್ : ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ನೀಡದಿರುವುದನ್ನು ಖಂಡಿಸಿರುವ ಕರ್ನಾಟಕ ದಲಿತ ಮಹಿಳಾ ಒಕ್ಕೂಟ (ಅಂಬೇಡ್ಕರ್‌ವಾದ) ಜಿಲ್ಲಾ ಸಮಿತಿ, ತಕ್ಷಣವೇ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾ ಸಂಚಾಲಕಿ ಜಗದೇವಿ ಭಂಡಾರಿ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಜೊತೆಗೆ ದಲಿತ ಮಹಿಳೆಯರ ಪಾತ್ರವೂ ಮಹತ್ವದ್ದಾಗಿದೆ. ಮಹಿಳಾ ಮೀಸಲಾತಿ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಗಳನ್ನು ಜಾರಿಗೆ ತರುವುದಾಗಿ ಹೇಳುವ ಸರ್ಕಾರ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಅವಕಾಶ ನೀಡದಿರುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವುದಾಗಿ ಹೇಳುವ ಸರ್ಕಾರ, ತನ್ನ ಸಚಿವ ಸಂಪುಟದಲ್ಲೇ ಮಹಿಳೆಯರಿಗೆ ಸಮರ್ಪಕ ಸ್ಥಾನ ನೀಡದಿರುವುದು ಖಂಡನೀಯವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಕೂಡಲೇ ಮಹಿಳೆಯೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಯನ್ನು ಸರ್ಕಾರ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.