ಬೀದರ್ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ

Update: 2026-08-05 20:23 IST

ಭಾಲ್ಕಿ : ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯನ್ನು ತಕ್ಷಣ ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ತಾಲೂಕು ಕನ್ನಡಪರ ಸಂಘಟನೆ ಆಗ್ರಹಿಸಿದೆ.

ಈ ಕುರಿತು ಮಂಗಳವಾರ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ಜಿಲ್ಲೆಯ ಬಹುತೇಕ ರೈತರ ಜಮೀನಿನಲ್ಲಿ ಬಿತ್ತನೆಯಾಗಿರುವ ಸೋಯಾಬೀನ್, ಅವರೆ, ಹೆಸರು, ಕಡಲೆ ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳು ಸಮರ್ಪಕ ಮಳೆಯಿಲ್ಲದೆ ಒಣಗುತ್ತಿವೆ ಎಂದು ದೂರಿದರು.

ಸಾಲ ಮಾಡಿ ಬಿತ್ತನೆ ನಡೆಸಿದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ. ಹೀಗಾಗಿ ರಾಜ್ಯ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬೀದರ್ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸುವ ಮೂಲಕ ಅವರ ಸಂಕಷ್ಟ ನಿವಾರಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಸಂಗಮೇಶ್ ಗುಮ್ಮೆ, ಮಾಳಾಸ್ಕಾಂತ್ ವಾಘೆ, ಸಂಜೀವಕುಮಾರ್ ನಾವದಗಿ, ಸಂತೋಷ್ ಬಿಜಿ ಪಾಟೀಲ್, ಭದ್ರೇಶ್ ಸ್ವಾಮಿ, ಶಿವಕುಮಾರ್ ಸ್ವಾಮಿ, ಅಶೋಕ್ ಅಂಬಿಗಾರ್, ಓಂಕಾರ್ ಮಚಕೂರಿ, ಆದಿಲ್ ಸಯ್ಯದ್, ಸುರೇಶ್ ಕಾಂಬಳೆ, ಸಂಗಮೇಶ್ ಮುರಗೆ, ಸಂಜು ಲಂಜವಾಡ್, ಶಿವರಾಜ್ ಭೂರೆ, ಚಂದ್ರಕಾಂತ್ ಮಾಲೂರೆ ಹಾಗೂ ರಾಜಕುಮಾರ್ ಜೋಶಿ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News