Bidar | ಪರಿಹಾರ ಮೊತ್ತ ಪಾವತಿಸದ ಹಿನ್ನೆಲೆ KKRTC ಬಸ್ ಜಪ್ತಿ
ಔರಾದ್ : ಕೆಕೆಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದ ಸಂಬಂಧದ ಪರಿಹಾರ ಪ್ರಕರಣದಲ್ಲಿ ನ್ಯಾಯಾಲಯ ಆದೇಶಿಸಿದರೂ ಪರಿಹಾರ ಮೊತ್ತವನ್ನು ಪಾವತಿಸದ ಹಿನ್ನೆಲೆಯಲ್ಲಿ, ಔರಾದ್ (ಬಿ) ಡಿಪೋದಲ್ಲಿರುವ ಕೆಕೆಆರ್‌ಟಿಸಿ ಬಸ್ ಜಪ್ತಿ ಮಾಡಲು ಔರಾದ್ ನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಅದರಂತೆ ಅರ್ಜಿದಾರರ ಪರ ವಕೀಲ ರವಿಕಾಂತ್ ಎ. ನೌಬಾದೆ ಅವರು ಔರಾದ್ (ಬಿ) ಡಿಪೋದಲ್ಲಿರುವ ಕೆಕೆಆರ್‌ಟಿಸಿ ಬಸ್ ಜಪ್ತಿ ಮಾಡಿದರು.
ಸುವರ್ಣಾ ಅವರು ಸಲ್ಲಿಸಿದ್ದ ದೂರಿನ ಪ್ರಕರಣದಲ್ಲಿ ನ್ಯಾಯಾಲಯವು ಅರ್ಜಿದಾರರ ಪರವಾಗಿ ತೀರ್ಪು ನೀಡಿದ್ದು, ಕೆಕೆಆರ್‌ಟಿಸಿ ಬೀದರ್ ವಿಭಾಗೀಯ ನಿಯಂತ್ರಕರು 31,85,750 ರೂ. ಮೂಲ ಪರಿಹಾರ ಮೊತ್ತ ಹಾಗೂ 4,77,862 ರೂ. ಬಡ್ಡಿ ಸೇರಿದಂತೆ ಒಟ್ಟು 36,63,612 ರೂ. ಪಾವತಿಸುವಂತೆ ಆದೇಶಿಸಿತ್ತು.
ಆದರೆ, ನ್ಯಾಯಾಲಯದ ಆದೇಶದಂತೆ ಪರಿಹಾರ ಮೊತ್ತ ಪಾವತಿಸದ ಕಾರಣ, ಡಿಕ್ರಿ ಜಾರಿಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಕೆಕೆಆರ್‌ಟಿಸಿ ಚರಾಸ್ತಿಯನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಔರಾದ್ (ಬಿ) ಡಿಪೋದಲ್ಲಿರುವ ಕೆಕೆಆರ್‌ಟಿಸಿಯ ಯಾವುದೇ ಬಸ್ ಅನ್ನು ಜಪ್ತಿ ಮಾಡುವಂತೆ ನ್ಯಾಯಾಲಯವು ವಾರಂಟ್ ಜಾರಿಗೊಳಿಸಿತ್ತು.
ಪ್ರಕರಣದಲ್ಲಿ ಅರ್ಜಿದಾರರ ಪರವಾಗಿರುವ ಹಿರಿಯ ವಕೀಲ ರವಿಕಾಂತ್ ಎ. ನೌಬಾದೆ ಅವರು ವಾದ ಮಂಡಿಸಿದ್ದು, ನ್ಯಾಯಾಲಯವು ಅವರ ವಾದವನ್ನು ಪರಿಗಣಿಸಿ ಬಸ್ ಜಪ್ತಿ ವಾರಂಟ್ ಹೊರಡಿಸಿದೆ. ಜಪ್ತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.