ಬೀದರ್ | ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ನೀಡಿ : ಡಿಗಂಬರ್ ಮಡಿವಾಳ್
ಬೀದರ್ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ರಾಜ್ಯ ಸಚಿವ ಸಂಪುಟದಲ್ಲಿ ಬೀದರ್ ಉತ್ತರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ರಹೀಂ ಖಾನ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮಡಿವಾಳ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಬೀದರ್ ಮಹಾನಗರ ಪಾಲಿಕೆಯ ಸದಸ್ಯ ಡಿಗಂಬರ್ ಮಡಿವಾಳ್ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಹೀಂ ಖಾನ್ ಅವರು 2009ರಿಂದ ನಿರಂತರವಾಗಿ 4 ಬಾರಿ ಶಾಸಕರಾಗಿ ಹಾಗೂ 2 ಬಾರಿ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರ ಪ್ರಬಲ ಧ್ವನಿಯಾಗಿರುವ ಅವರು, ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದ ಎಲ್ಲಾ ಸಮಾಜದ ಬಾಂಧವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರನ್ನು ಪರಿಗಣಿಸಿ ಅವರನ್ನು ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಮಹಾಸಭಾ ಅಧ್ಯಕ್ಷ ಪ್ರದೀಪ್ ಜಂಜಿರೆ ಅವರು ಮಾತನಾಡಿ, ಜಿಲ್ಲೆಯಲ್ಲಿ ರಹೀಂ ಖಾನ್ ಅವರು ತಾವು ಸಚಿವರಿದ್ದಾಗ ಪ್ರಮುಖ ಅಭಿವೃದ್ಧಿ ಕಾಮಗಾರಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಅವರ ಅವಧಿಯಲ್ಲಿ ನೀಡಲಾದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರ ಧ್ವನಿಯಾಗಿ ಹಾಗೂ ಜನಪರ ನಾಯಕನಾಗಿ ಗುರುತಿಸಿಕೊಂಡಿರುವ ಅವರು, ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆ ಹಾಗೂ ಪ್ರದೇಶಕ್ಕೆ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಕರ್ನಾಟಕ ಕ್ರೈಸ್ತ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರಮೋದ್ ಚಿದ್ರಿ, ಸವಿತಾ ಸಮಾಜ ಸಂಘದ ಮಾಜಿ ಅಧ್ಯಕ್ಷ ಶಾಮರಾವ್ ಮೋರ್ಗಿಕರ್, ಕ್ರೈಸ್ತ ಸಮುದಾಯದ ಮುಖಂಡ ಜಾನಸನ್ ದೊಡ್ಡಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರವೇ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಪ್ರಶಾಂತ್ ಭಾವಿಕಟ್ಟಿ, ಅಂಬಿಗರ ಚೌಡಯ್ಯ ಯುವ ಸೇನೆಯ ಅಧ್ಯಕ್ಷ ಸುನೀಲ್ ಭಾವಿಕಟ್ಟಿ ಹಾಗೂ ಹರಳಯ್ಯ ಸಮಾಜ ಸಂಘದ ತಾಲೂಕಾಧ್ಯಕ್ಷ ಸುಭಾಷ್ ಹಮೀಲಾಪೂರಕರ್ ಸೇರಿದಂತೆ ಇನ್ನಿತರ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.