×
Ad

Bidar | ಫ್ರೂಟ್ಸ್‌ ತಂತ್ರಾಂಶದಲ್ಲಿ ಜಮೀನು ವಿವರ ಲಿಂಕ್ ಕಡ್ಡಾಯ : ಜಂಟಿ ಕೃಷಿ ನಿರ್ದೇಶಕಿ ದೇವಿಕಾ

Update: 2026-07-02 17:07 IST

ಬೀದರ್ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಫ್ರೂಟ್ಸ್ ತಂತ್ರಾಂಶದಲ್ಲಿ ಜಿಲ್ಲೆಯ ಎಲ್ಲಾ ರೈತರಿಗೆ ಸೆಂಟ್ರಲ್ ಫಾರ್ಮರ್ಸ್ ಐಡಿ (ಎಫ್‌ಐಡಿ) ಸೃಜಿಸುವುದು ಕಡ್ಡಾಯವಾಗಿದ್ದು, ರೈತರು ತಮ್ಮ ಜಮೀನಿನ ಎಲ್ಲಾ ವಿವರಗಳನ್ನು ಕೂಡಲೇ ಲಿಂಕ್ ಮಾಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು 4,97,049 ಜಮೀನಿನ ಪ್ಲಾಟ್‌ಗಳು ಇದ್ದು, ಇದುವರೆಗೆ 3,62,411 ಪ್ಲಾಟ್‌ಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಲಿಂಕ್ ಮಾಡಲಾಗಿದೆ. ಉಳಿದಿರುವ ಪ್ಲಾಟ್‌ಗಳ ಮಾಹಿತಿಯನ್ನು ಶೀಘ್ರದಲ್ಲೇ ದಾಖಲಿಸುವಂತೆ ರೈತರಿಗೆ ಮನವಿ ಮಾಡಿದ್ದಾರೆ.

ತಾಲೂಕುವಾರು ಬಾಕಿ ಇರುವ ಪ್ಲಾಟ್‌ಗಳ ಸಂಖ್ಯೆ ಬಸವಕಲ್ಯಾಣದಲ್ಲಿ 22,602, ಭಾಲ್ಕಿಯಲ್ಲಿ 21,180, ಔರಾದ್ (ಬಿ) 14,276, ಬೀದರ್ 20,412, ಹುಮನಾಬಾದ್ 11,829, ಚಿಟಗುಪ್ಪಾ 9,667, ಕಮಲನಗರ 8,035 ಹಾಗೂ ಹುಲಸೂರಿನಲ್ಲಿ 3,782 ಆಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 1,11,783 ಜಮೀನಿನ ಪ್ಲಾಟ್‌ಗಳ ವಿವರ ಇನ್ನೂ ದಾಖಲಿಸಬೇಕಿದೆ ಎಂದು ತಿಳಿಸಿದ್ದಾರೆ.

ಬರ ಪರಿಹಾರ, ಬೆಳೆ ವಿಮೆ, ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ವಿವಿಧ ಇಲಾಖೆಗಳ ರಿಯಾಯಿತಿ ಸೌಲಭ್ಯಗಳನ್ನು ಪಡೆಯಲು ರೈತರ ಒಡೆತನದ ಎಲ್ಲಾ ಜಮೀನಿನ ವಿವರಗಳನ್ನು ಎಫ್‌ಐಡಿಯಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳಿಂದ ರೈತರು ವಂಚಿತರಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರೈತರು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕೃಷಿ, ತೋಟಗಾರಿಕೆ, ರೇಷ್ಮೆ ಅಥವಾ ಕಂದಾಯ ಇಲಾಖೆ ಕಚೇರಿಗಳಿಗೆ ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಭೇಟಿ ನೀಡಿ ತಮ್ಮ ಎಲ್ಲಾ ಜಮೀನಿನ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಲಿಂಕ್ ಮಾಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News