×
Ad

ಬೀದರ್ | ಏಣಕುರ್ ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ, ಅಧಿಕಾರಿಗಳಿಂದ ನಿರ್ಲಕ್ಷ : ಸಾಮಾಜಿಕ ಕಾರ್ಯಕರ್ತ ಭೀಮರೆಡ್ಡಿ ಆರೋಪ

Update: 2026-05-18 19:14 IST

ಬೀದರ್ : ಭಾಲ್ಕಿ ತಾಲೂಕಿನ ಏಣಕುರ್ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ದೂರು ನೀಡಿದರು ಕೂಡ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಭೀಮರೆಡ್ಡಿ ಸಿಂಧನಕೇರಾ ಅವರು ಪ್ರಕಟಣೆ ಮೂಲಕ ಆರೋಪಿಸಿದ್ದಾರೆ.

ಏಣಕುರ್ ಗ್ರಾಮ ಪಂಚಾಯತಿಯಲ್ಲಿ 2023-24 ಮತ್ತು 2024-25ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಕುಡಿಯುವ ನೀರು, ಸಿಟಿಲೈಟ್, ಚರಂಡಿ, ಬೋರ್‌ವೆಲ್‌ ರಿಪೇರಿ ಇತ್ಯಾದಿ ಕಾಮಗಾರಿಗಳ ಹಣವನ್ನು ತುಕಾರಾಮ ಅವರನ್ನು ಟೆಂಡರ್ ಮಾಡಿ ಜಮೆ ಮಾಡಿರುತ್ತಾರೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ್ ಇವರು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಅವ್ಯವಹಾರದ ಬಗ್ಗೆ 2026ರ ಫೆ.17ರಂದು ಜಿಲ್ಲಾ ಪಂಚಾಯತ್ ಗೆ 36 ಪುಟಗಳ ಭ್ರಷ್ಟಾಚಾರದ ದಾಖಲೆಗಳು ಸಲ್ಲಿಸಲಾಗಿತ್ತು. ಆ ನಂತರದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 2026ರ ಮಾ.3ರಂದು ಈ ವಿಷಯದ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಒಂದು ವಾರದೊಳಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದರು. ಆದರೆ, ಭಾಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸೂರ್ಯಕಾಂತ್ ಬಿರಾದಾರ್ ಅವರು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಅವ್ಯವಹಾರದಲ್ಲಿ ಭಾಲ್ಕಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸೂರ್ಯಕಾಂತ್ ಬಿರಾದಾರ್ ಅವರ ಕೈವಾಡ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ರಾಜ್ಯದ ಬೇರೆ ಜಿಲ್ಲೆಯ ಅಧಿಕಾರಿಗಳಿಂದ ತನಿಖೆಗೆ ಆದೇಶ ಮಾಡಬೇಕು. ಒಂದು ವೇಳೆ ಹೀಗೆ ಮಾಡದಿದ್ದರೆ ಲೋಕಾಯುಕ್ತ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News