Bidar | ತಂತ್ರಜ್ಞಾನದ ಬಳಕೆಯಲ್ಲಿ ವಿವೇಕ ಅಗತ್ಯ: ಡಾ.ರಮೇಶ್ ಕೆ.ಬಿ.
‘ಅರಿವಿನ ಪಯಣ–2026’ ಶೈಕ್ಷಣಿಕ ಚಟುವಟಿಕೆಗಳ ಸಮಾರಂಭ
ಬೀದರ್: ಆಧುನಿಕ ತಂತ್ರಜ್ಞಾನ ಮಾನವ ಜಗತ್ತನ್ನು ಪಲ್ಲಟಗೊಳಿಸಿದೆ. ಅದರ ಶಕ್ತಿ ಮತ್ತು ಮಿತಿಗಳ ಕುರಿತು ವಿಮರ್ಶಾತ್ಮಕ ಚರ್ಚೆ ನಡೆಯಬೇಕು ಎಂದು ಎಸ್ಎಸ್ಕೆಬಿ ಕಾಲೇಜಿನ ಪ್ರಾಚಾರ್ಯ ಡಾ.ರಮೇಶ್ ಕೆ.ಬಿ. ಹೇಳಿದರು.
ನಗರದ ಬಿಕೆಡಿಬಿ ಸಭಾಂಗಣದಲ್ಲಿ ಬಸವೇಶ್ವರ ಪದವಿ ಕಾಲೇಜಿನ ವತಿಯಿಂದ ಆಯೋಜಿಸಿದ್ದ ‘ಅರಿವಿನ ಪಯಣ–2026’ ಶೈಕ್ಷಣಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಉದ್ದೇಶಕ್ಕಾಗಿ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂಬ ಚಿಂತನೆ ಮತ್ತು ವಿವೇಕ ಇಂದು ಹೆಚ್ಚು ಅಗತ್ಯವಾಗಿದೆ. ಸಮಯಪ್ರಜ್ಞೆ, ಶಿಸ್ತು ಹಾಗೂ ಕ್ರಿಯಾಶೀಲತೆ ವಿದ್ಯಾರ್ಥಿಗಳ ಜಾಯಮಾನವಾಗಬೇಕು. ಬದ್ಧತೆ, ಸತತ ಶ್ರಮ ಮತ್ತು ಅಧ್ಯಯನವು ಸರ್ವತೋಮುಖ ಅಭಿವೃದ್ಧಿಗೆ ಮಾರ್ಗವಾಗಿವೆ. ಮೌಲ್ಯಗಳು, ಹಿರಿಯರ ಬಗೆಗಿನ ಗೌರವ ಹಾಗೂ ಸಕಾರಾತ್ಮಕ ಆಲೋಚನೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಪ್ರಮುಖ ಅಂಶಗಳಾಗಿವೆ ಎಂದು ತಿಳಿಸಿದರು.
ತಂತ್ರಜ್ಞಾನದ ಬಳಕೆ ಜ್ಞಾನ, ಅಭಿವೃದ್ಧಿ ಮತ್ತು ಕೌಶಲ್ಯದ ಬೆಳವಣಿಗೆಗೆ ಸಹಕಾರಿಯಾಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಂ, ಟ್ವಿಟರ್, ಚಾಟ್ಜಿಪಿಟಿ ಮೊದಲಾದ ತಂತ್ರಜ್ಞಾನಗಳನ್ನು ಮಾಹಿತಿ ಮತ್ತು ಜ್ಞಾನ ಸಂಪಾದನೆಗೆ ಬಳಸಿಕೊಳ್ಳಬೇಕು. ಅವು ಕೇವಲ ಮನರಂಜನೆಯ ಸಾಧನಗಳಾಗಬಾರದು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಭೀಮಾಶಂಕರ್ ಬಿರಾದಾರ್ ಮಾತನಾಡಿ, ಜ್ಞಾನದ ಭಾಷೆ ಮತ್ತು ಬದುಕಿನ ಭಾಷೆಯನ್ನು ಒಂದುಗೂಡಿಸುವ ಕೆಲಸ ಶಿಕ್ಷಣದಿಂದ ಸಾಧ್ಯವಾಗಬೇಕು. ಬದುಕಿನ ಸಹಜತೆಗಿಂತ ಧಾವಂತ ಮತ್ತು ಹಪಾಹಪಿತನ ಹೆಚ್ಚಾಗಿ, ವ್ಯವಧಾನ ಹಾಗೂ ಆಲೋಚನಾ ಕ್ರಮವನ್ನು ಮಾಯವಾಗಿಸುವ ಶಿಕ್ಷಣ ಪದ್ಧತಿ ಅಪಾಯಕಾರಿಯಾಗಿದೆ. ಬೌದ್ಧಿಕತೆ, ವೈಚಾರಿಕತೆ, ಮಾನವೀಯತೆ, ವಿವೇಕ ಮತ್ತು ಅಂತಃಕರಣವನ್ನು ಬೆಳೆಸುವ ಅರಿವಿನ ದಾರಿಯನ್ನು ಕಂಡುಕೊಳ್ಳಬೇಕು ಎಂದು ನುಡಿದರು.
ಬಿಡಿವಿಸಿ ಉಪಾಧ್ಯಕ್ಷ ಡಾ. ಜಿ.ಎಸ್. ಭುರಾಳೆ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಒಬ್ಬರನ್ನೊಬ್ಬರು ಗೌರವಿಸುವ ಗುಣವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವ ಕಾಳಜಿಯೂ ಇಂದಿನ ಯುವಕರಲ್ಲಿ ಮೂಡಬೇಕು ಎಂದರು.
ಈ ವೇಳೆ ಬಿಡಿಪಿಸಿ ನಿರ್ದೇಶಕಿ ಪುಷ್ಪಾವತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಅಶೋಕ್ ರೆಡ್ಡಿ ಗದಲೇಗಾಂವ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಡಿಪಿಸಿ ನಿರ್ದೇಶಕ ಬಸವರಾಜ್ ತೊಂಡಾರೆ, ಬಿಡಿಪಿಸಿ ಸಹಕಾರ್ಯದರ್ಶಿ ಸುನಿಲ್ ರಾಯವಾಡೆ, ನಿರ್ದೇಶಕ ವೀರಣ್ಣ ಹಲಶೆಟ್ಟೆ, ಬಸವೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ರುದ್ರಮಣಿ ಮಠಪತಿ, ಬಸವೇಶ್ವರ ಪಿಜಿ ಕಾಲೇಜಿನ ಪ್ರಾಚಾರ್ಯೆ ಡಾ. ಶಾಂತಲಾ ಪಾಟೀಲ್, ಉಪನ್ಯಾಸಕರಾದ ಶ್ರೀನಿವಾಸ್ ಉಮಾಪುರೆ, ಪವನ್ ಪಾಟೀಲ್, ವಿವೇಕಾನಂದ್ ಶಿಂಧೆ, ಪ್ರಿಯಾ ಚೌಹಾನ್, ನಾಗವೇಣಿ ಬಿರಾದಾರ್, ಶೀತಲ್ ರೆಡ್ಡಿ, ಡಾ. ಬಸವರಾಜ್ ಖಂಡಾಳೆ, ಸನತ್ ರೆಡ್ಡಿ, ಸೌಮ್ಯಾ ಜೋಶಿ, ಸಚಿನ್ ಬಿಡುವೆ, ಐಶ್ವರ್ಯಾ ಖರೊಣೆ, ನಾಗರಾಜ್ ನಾಸೆ, ಸುಮಾ, ಎಂ.ಡಿ. ಜಬಿ, ಸಂಗೀತಾ ಮಹಾಗಾವೆ, ರೋಷನ್ ಬಿ., ಮಯೂರಿ ಪಾಟೀಲ್, ಗಂಗಾಧರ ಸಾಲಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜ್ಯೋತಿ ತೂಗಾವೆ ನಿರೂಪಿಸಿ, ವಂದಿಸಿದರು.