Bidar | ಸಮಾಜವಾದಿ ಜನತಾ ಪಕ್ಷದಿಂದ ಎಲ್ಲ ಚುನಾವಣೆಯಲ್ಲಿ ಸ್ಪರ್ಧೆ : ಜಿ.ಎಂ.ಗಾಡ್ಕರ್
ಬೀದರ್: ಸಮಾಜವಾದಿ ಜನತಾ ಪಕ್ಷವು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸಂಘಟನೆ ಬಲಪಡಿಸುವ ಮೂಲಕ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಜಿ.ಎಂ. ಗಾಡ್ಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಜಾತೀಯತೆ, ಮೇಲು-ಕೀಳು ಹಾಗೂ ಅಸಮಾನತೆ ಇದೆ ಎಂದು ಆರೋಪಿಸಿದರು. ಇವುಗಳನ್ನು ಮೀರಿ ಸಮ ಸಮಾಜ ನಿರ್ಮಿಸುವ ಉದ್ದೇಶದಿಂದ ಸಮಾಜವಾದಿ ಜನತಾ ಪಕ್ಷವನ್ನು ಕಟ್ಟಲಾಗಿದೆ ಎಂದರು.
ದೇಶದಲ್ಲಿ ಇಂದಿಗೂ ಹಲವು ದುರ್ಬಲ ವರ್ಗಗಳ ಜನರಿಗೆ ವಾಸಿಸಲು ಮನೆ, ದುಡಿದು ಬದುಕಲು ಭೂಮಿ, ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಹಾಗೂ ಬಡವರಿಗೆ ಸಮರ್ಪಕ ಆರೋಗ್ಯ ಮತ್ತು ಆರ್ಥಿಕ ಸೌಲಭ್ಯಗಳು ಸೇರಿದಂತೆ ಕನಿಷ್ಠ ಮೂಲಭೂತ ಹಕ್ಕುಗಳು ದೊರೆಯದ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಸ್ಪೃಶ್ಯತೆ, ಅಸಮಾನತೆ, ಜಾತೀಯತೆ ಹಾಗೂ ಮತಾಂಧತೆಯಂತಹ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿದ ಅವರು, ಜನರ ತೆರಿಗೆ ಹಣದ ದುರ್ಬಳಕೆ ಹಾಗೂ ಭ್ರಷ್ಟಾಚಾರದಿಂದ ಪ್ರಜಾಪ್ರಭುತ್ವ ವಿರೋಧಿ ಆಡಳಿತ ನಡೆಯುತ್ತಿದೆ ಎಂದು ದೂರಿದರು.
ಸಮಾಜವಾದಿ ಜನತಾ ಪಕ್ಷವು ಈಗಾಗಲೇ ರಾಜ್ಯದ ಕೆಲವು ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಕೆಲವು ಕ್ಷೇತ್ರಗಳಲ್ಲಿ ಪಕ್ಷಕ್ಕೆ 10 ಸಾವಿರಕ್ಕೂ ಅಧಿಕ ಮತಗಳು ಬಂದಿವೆ. ಬೀದರ್‌ನಲ್ಲಿಯೂ ಆರು ತಿಂಗಳೊಳಗೆ ಪಕ್ಷವನ್ನು ಬಲಪಡಿಸುವ ಕಾರ್ಯ ಕೈಗೊಳ್ಳಲಾಗುವುದು. ಪಂಚಾಯಿತಿ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ನಡೆಯಲಿರುವ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂದು ಜಿ.ಎಂ. ಗಾಡ್ಕರ್ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸತೀಶ್ ಪಾಟೀಲ್, ಬಾಲಾಜಿ ಔರಾದ್ಕರ್, ಶೇಕ್ ಶಿಜಾಉದ್ದಿನ್, ವಿನೋದ್ ಕುಲಕರ್ಣಿ, ದೇವಿದಾಸ್ ರಾಥೋಡ್, ರವೀಂದ್ರ ಕೊಳ್ಳುರ್, ರೂಪಾ ಜೋಷಿ ಹಾಗೂ ರಾಜಕುಮಾರ್ ಮಾಳಗೆ ಸೇರಿದಂತೆ ಇತರರು ಇದ್ದರು.