ಬೀದರ್: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರು ಪರಾಕ್ರಮಿ ಹಾಗೂ ದೇಶಭಕ್ತರಾಗಿದ್ದು, ಇಡೀ ದೇಶದ ಆಸ್ತಿಯಾಗಿದ್ದಾರೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್ ಹೇಳಿದರು.

ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಗೊಂಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸ್ವಾತಂತ್ರ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜಯಂತಿ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಯುವ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಮಾತನಾಡಿ, ಸಂಗೊಳ್ಳಿ ರಾಯಣ್ಣ ಅವರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಇಂದಿನ ಯುವಕರು ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸಬೇಕು. ರಾಯಣ್ಣ ಅವರ ತತ್ವ, ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗೊಂಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ್ ಚಿಮಕೋಡೆ ಮಾತನಾಡಿ, ಒಕ್ಕೂಟವು ಕಳೆದ ಆರು ವರ್ಷಗಳಿಂದ ಗೊಂಡ ಸಮಾಜದ ಹಿತ ರಕ್ಷಣೆಗೆ ಶ್ರಮಿಸುತ್ತಿದೆ. ಸಮಾಜಕ್ಕೆ ಅನ್ಯಾಯವಾದಾಗ ಪ್ರತಿಭಟನೆ ನಡೆಸಿದ್ದು, ಉತ್ತಮ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಯುವಕರೇ ದೇಶದ ಸಂಪತ್ತಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಯುವ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಔರಾದ್ ತಾಲೂಕು ಘಟಕದ ಅಧ್ಯಕ್ಷ ಬಾಲಾಜಿ ಅಮರವಾಡಿ, ಸಾಹಿತಿ ಬಾಲಾಜಿ ಕುಂಬಾರ್ ಹಾಗೂ ಟೀಮ್ ಯುವಾದ ವಿನಯ್ ಮಾಳಗೆ ಸಂವಾದ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಬಾಬುರಾವ್ ಮಲ್ಕಾಪುರ್, ಬಸವರಾಜ್ ಮಾಳಗೆ, ಮಲ್ಲಿಕಾರ್ಜುನ ಬಿರಾದಾರ್, ಶಕುಂತಲಾ ಬೆಲ್ದಾಳೆ, ಆನಂದ್ ಕಾಶೆಂಪುರ್, ಎಂ.ಎಸ್. ಕಟಗಿ, ಬಾಬುರಾವ್ ಲದ್ದೆ, ಭೀಮಸಿಂಗ್, ಇಂದುಮತಿ ಚಿದ್ರಿ, ಅನಿಲಕುಮಾರ್ ಬೆಲ್ದಾರ್, ಪ್ರದೀಪ್ ಜಂಜೀರೆ, ದೇವೇಂದ್ರ ಸೋನಿ, ಪಂಡಿತ್ ಚಿಮಕೋಡ್, ರಾಮ ಚಾಂದೋರಿ, ಸಂಗಪ್ಪ ಚಿದ್ರಿ, ಕುಶಾಲ್ ಹಾಸಗೊಂಡ್‌, ಪಂಡಿತ ಹಾವಗೊಂಡ ಹಾಗೂ ಗುಂಡಪ್ಪ ಚಾಂಬೋಳ್ ಸೇರಿದಂತೆ ಅನೇಕರು ಇದ್ದರು. ನಾಗೇಶ್ ಜಾನಕನೋರ್ ನಿರೂಪಿಸಿದರು. ಮಾಣಿಕಪ್ಪ ಬರಿದಾಬಾದ್ ಸ್ವಾಗತಿಸಿದರು. ಸಿದ್ದು ಗಾದಗಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor