×
Ad

Bidar | ಗುಣಮಟ್ಟದ ಸಂಶೋಧನೆಗೆ ವೈಜ್ಞಾನಿಕ ದೃಷ್ಟಿಕೋನ ಅಗತ್ಯ: ಕುಲಪತಿ ಬಿರಾದಾರ್

ಬೀದರ್ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಕಾರ್ಯಾಗಾರ ಸಮಾರೋಪ

Update: 2026-07-09 18:03 IST

ಬೀದರ್: ಉನ್ನತ ಶಿಕ್ಷಣದಲ್ಲಿ ಗುಣಮಟ್ಟದ ಸಂಶೋಧನೆಗೆ ವೈಜ್ಞಾನಿಕ ದೃಷ್ಟಿಕೋನ, ಸಂಶೋಧನಾ ನೈತಿಕತೆ ಹಾಗೂ ಆಧುನಿಕ ಸಂಖ್ಯಾಶಾಸ್ತ್ರೀಯ ತಂತ್ರಾಂಶಗಳ ಸಮರ್ಥ ಬಳಕೆ ಅತ್ಯಗತ್ಯವಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ್ ಹೇಳಿದರು.

ಬೀದರ್ ವಿಶ್ವವಿದ್ಯಾಲಯದ ವಾಣಿಜ್ಯ ಹಾಗೂ ಅರ್ಥಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಇತ್ತೀಚಿನ ಸಂಶೋಧನಾ ವಿಧಾನಗಳ ಪ್ರವೃತ್ತಿಗಳು ಹಾಗೂ ಸಂಖ್ಯಾಶಾಸ್ತ್ರೀಯ ಸಾಧನಗಳ ಬಳಕೆ’ ವಿಷಯದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕುಲಸಚಿವ ಪ್ರೊ. ಪರಮೇಶ್ವರ್ ನಾಯಕ್ ಟಿ. ಮಾತನಾಡಿ, ಸಂಶೋಧಕರು ಜ್ಞಾನ ಸೃಷ್ಟಿಯ ಜೊತೆಗೆ ಸಮಾಜದ ಅಭಿವೃದ್ಧಿಗೆ ಪೂರಕವಾಗುವ ಅಧ್ಯಯನಗಳನ್ನು ಕೈಗೊಳ್ಳಬೇಕು ಎಂದು ಕರೆ ನೀಡಿದರು.

ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ. ನಿರಂಜನ್ ಆರ್. ಅವರು ಸಂಶೋಧನಾ ವಿಧಾನಶಾಸ್ತ್ರ, ಸಂಶೋಧನಾ ವಿನ್ಯಾಸ, ದತ್ತಾಂಶ ಸಂಗ್ರಹಣೆ, ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ ಹಾಗೂ ಎಸ್‌ಪಿಎಸ್‌ಎಸ್‌ ಮತ್ತು ಎಕ್ಸೆಲ್‌ ಸೇರಿದಂತೆ ವಿವಿಧ ಸಂಖ್ಯಾಶಾಸ್ತ್ರೀಯ ತಂತ್ರಾಂಶಗಳ ಬಳಕೆಯ ಕುರಿತು ಉಪನ್ಯಾಸ ಹಾಗೂ ಪ್ರಾಯೋಗಿಕ ತರಬೇತಿ ನೀಡಿದರು.

ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಡಾ. ರವೀಂದ್ರನಾಥ್ ಗಬಾಡಿ ಮಾತನಾಡಿ, ಇಂತಹ ಕಾರ್ಯಾಗಾರಗಳು ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲ ಪ್ರತಿನಿಧಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಯೋಜಕರಾದ ಡಾ. ಅಂಬರೀಷ್ ವೀರನಾಯ್ಕ್ ಹಾಗೂ ಡಾ. ಶಿವಕುಮಾರ್ ಹೂಗಾರ್ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಶಾಂತಕುಮಾರ್ ಚಿದ್ರಿ ಪ್ರಾರ್ಥನೆ ಗೀತೆ ಹಾಡಿದರು. ಡಾ. ಸಂತೋಷಿ ಮಡ್ದೆ ಸ್ವಾಗತಿಸಿದರು. ಅರುಣಕುಮಾರ್ ಬೇಂದ್ರೆ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News