ಬೀದರ್: ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಮುಹಮ್ಮದ್ ರಫಿ ತಾಳೆಕೋಟೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬೀದರ್‌ನಿಂದ ಬೆಂಗಳೂರಿನವರೆಗೆ ವಿಮಾನಯಾನ ಮಾಡಿಸಿದ್ದಾರೆ. 

ಆರತಿ, ಸಾಯಿನಾಥ್, ಅಮೀತ್, ಮುಶ್ತಾಕ್, ಶ್ರೀನಿವಾಸ್, ಅಶ್ವಿನಿ, ಅಕ್ಷತಾ ಹಾಗೂ ಸೋನಿ ವಿಮಾನಯಾನದ ಅನುಭವ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.

ಹತ್ತನೇ ತರಗತಿಯಲ್ಲಿ ಪಾಠ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅತಿ ಹೆಚ್ಚು ಅಂಕಗಳಿಸುವ 10 ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸುವುದಾಗಿ ಶಿಕ್ಷಕ ಮುಹಮ್ಮದ್ ರಫಿ ಭರವಸೆ ನೀಡಿದ್ದರು. ಅದರಂತೆ, 10 ವಿದ್ಯಾರ್ಥಿಗಳ ಪೈಕಿ ಇಬ್ಬರು ವೈಯಕ್ತಿಕ ಕಾರಣಗಳಿಂದ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಂಟು ವಿದ್ಯಾರ್ಥಿಗಳಿಗೆ ವಿಮಾನಯಾನದ ವ್ಯವಸ್ಥೆ ಮಾಡಿದರು. 

ಈ ಕುರಿತು ಮಾತನಾಡಿದ ಶಿಕ್ಷಕ ರಫಿ, “ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮೂಡಬೇಕು ಎಂಬ ಉದ್ದೇಶದಿಂದ ಈ ಕಾರ್ಯ ಮಾಡಿದ್ದೇನೆ. ವಿಶೇಷವಾಗಿ ಕನ್ನಡ ಮಾಧ್ಯಮದಲ್ಲಿ ಓದುವ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿಮಾನಯಾನದ ಅನುಭವ ಕಲ್ಪಿಸಬೇಕೆಂದು ಬಯಸಿದ್ದೆ. ಶ್ರೀಮಂತ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡುವ ಅವಕಾಶ ಸಾಮಾನ್ಯವಾಗಿ ಸಿಗುತ್ತದೆ. ಆದರೆ ಬಡ ಮಕ್ಕಳಿಗೂ ಇಂತಹ ಅನುಭವ ಸಿಗಬೇಕು ಎಂಬುದು ನನ್ನ ಆಶಯ ಎಂದು ಹೇಳಿದ್ದಾರೆ.

ಹಿಂದೆ ಒಂದು ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ರೈಲಿನಲ್ಲಿ ಕರೆದುಕೊಂಡು ಹೋದಾಗ, ವಿದ್ಯಾರ್ಥಿಯೊಬ್ಬ ಮೊದಲ ಬಾರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರುವುದಾಗಿ ಹೇಳಿ ತುಂಬಾ ಖುಷಿಪಟ್ಟಿದ್ದ. ಆಗ ಬಡ ಮಕ್ಕಳಿಗೂ ವಿಮಾನಯಾನದ ಅನುಭವ ಕಲ್ಪಿಸಬೇಕು ಎಂದು ಅನಿಸಿತು. ಇದೀಗ ವಿಮಾನಯಾನ ಮಾಡಿದ ವಿದ್ಯಾರ್ಥಿಗಳು ತುಂಬಾ ಸಂತೋಷಗೊಂಡಿದ್ದಾರೆ” ಎಂದು ಹರ್ಷ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ಅಕ್ಷತಾ ಮಾತನಾಡಿ, “ಶಾಲೆಯಲ್ಲಿ ನಮ್ಮ ಶಿಕ್ಷಕರು ವಿಮಾನಯಾನದ ಬಗ್ಗೆ ಹೇಳಿದ್ದರು. ಈಗ ನಮಗೂ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿರುವುದರಿಂದ ತುಂಬಾ ಖುಷಿಯಾಗಿದೆ. ನಮ್ಮ ರಫಿ ಸರ್ ತುಂಬಾ ಗ್ರೇಟ್” ಎಂದು ಸಂತಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor