ಹುಮನಾಬಾದ್: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರ ಹೊಲಗಳಲ್ಲಿ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಹೊರರಾಜ್ಯಗಳಿಗೆ ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಅಂಬೇಡ್ಕರ್ ವೃತ್ತದಿಂದ ಹಲಗೆ ಬಾರಿಸುತ್ತಾ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು ತಹಶೀಲ್ದಾರ್ ಕಚೇರಿಗೆ ತೆರಳಿ, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.

ವಿಬಿ-ಜಿ ರಾಮ್ ಜಿ ಯೋಜನೆಯ ಖಜಾನೆ-2 (ಕೆ-2) ಪದ್ಧತಿಯಡಿ ಇದುವರೆಗೆ ಶೇ.70ರಷ್ಟು ಕೂಲಿ ಕಾರ್ಮಿಕರಿಗೆ ಕೂಲಿ ಹಣ ಪಾವತಿಯಾಗಿಲ್ಲ. ಪ್ರತಿ ಹಳ್ಳಿಯಲ್ಲೂ ಕುಡಿಯುವ ನೀರಿನ ಹಾಹಾಕಾರ ಎದುರಾಗಿದ್ದು, ದನಕರುಗಳಿಗೆ ಮೇವು ಮತ್ತು ನೀರಿನ ಸಮಸ್ಯೆ ಉಂಟಾಗಿದೆ. ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಿ ನಾಲ್ಕು ತಿಂಗಳು ಕಳೆದಿದ್ದರೂ ಪರಿಹಾರ ದೊರೆತಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

ವಿಬಿ-ಜಿ ರಾಮ್ ಜಿ ಯೋಜನೆಯ ಕೆ-2 ಪದ್ಧತಿಯನ್ನು ರದ್ದುಗೊಳಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರಿಗೆ 200 ದಿನಗಳ ಕೆಲಸ ಒದಗಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೆರೆಯನ್ನು ಅಭಿವೃದ್ಧಿಪಡಿಸಬೇಕು ಅಥವಾ ಹೊಸ ಕೆರೆ ನಿರ್ಮಿಸಬೇಕು. ಜುಲೈ 1ರಿಂದ ಬಾಕಿ ಉಳಿದಿರುವ ವಿಬಿ-ಜಿ ರಾಮ್ ಜಿ ಯೋಜನೆಯ ಕೂಲಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ರೈತರಿಗೆ ಬರಗಾಲದ ಪರಿಹಾರವನ್ನು ತಕ್ಷಣ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.

ಏಳು ತಿಂಗಳಿಂದ ಸ್ಥಗಿತಗೊಂಡಿರುವ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ಹಾಗೂ ವಿಧವಾ ವೇತನವನ್ನು ಕೂಡಲೇ ಮರುಜಾರಿಗೊಳಿಸಬೇಕು. ಮನರೇಗಾ ಯೋಜನೆಯ ಹಳೆಯ ಬಾಕಿ ಕೂಲಿ ಹಣವನ್ನು ಪಾವತಿಸಬೇಕು. ಕಾಯಕ ಬಂಧುಗಳಿಗೆ ಕೂಲಿ ಕಾರ್ಮಿಕರ ಹಾಜರಾತಿಯ ಆಧಾರದ ಮೇಲೆ ದಿನಕ್ಕೆ ಹೆಚ್ಚುವರಿಯಾಗಿ ನಾಲ್ಕು ರೂ. ಪಾವತಿಸಬೇಕು ಎಂದು ಒತ್ತಾಯಿಸಲಾಗಿದೆ.

ಪಡಿತರ ಚೀಟಿಯ ಇ-ಕೆವೈಸಿ ಮಾಡಿಸಲು ನೀಡಿರುವ ಗಡುವನ್ನು ಒಂದು ತಿಂಗಳು ವಿಸ್ತರಿಸಬೇಕು. ಆಧಾರ್ ಕಾರ್ಡ್ ಸೇವಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಗ್ರಾಮಗಳಲ್ಲಿ ದನಕರುಗಳ ಕುಡಿಯುವ ನೀರಿಗಾಗಿ ತೊಟ್ಟಿಗಳನ್ನು ನಿರ್ಮಿಸಬೇಕು ಹಾಗೂ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮೇವಿನ ಕೇಂದ್ರ ತೆರೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಇಸಾಮೊದ್ದೀನ್, ತಾಲ್ಲೂಕಾಧ್ಯಕ್ಷ ದೇವಾನಂದ್ ಬಿ. ಗಾಯಕವಾಡ್, ಕಾರ್ಯದರ್ಶಿ ಸಿದ್ರಾಮ್ ಎಂ. ಡಾಂಗೆ, ಉಪಾಧ್ಯಕ್ಷ ಕಂಟೆಪ್ಪ ಪೂಜಾರಿ, ಸಹ ಕಾರ್ಯದರ್ಶಿ ಸೂರ್ಯಕಾಂತ್ ಸಂತೋಷಕರ್, ಜಿಲ್ಲಾ ಕಾರ್ಯದರ್ಶಿ ಅಂಬುಬಾಯಿ ಮಾಳಗೆ, ಹುಸೇನ್ ಕನಕಟ್ಟಾ ಹಾಗೂ ಅಮರ್ ಹುಣಸಗೇರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor