ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲುವು ಖಚಿತ : ಪ್ರಕಾಶ್ ಖಂಡ್ರೆ
ಭಾಲ್ಕಿ : ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಅವರು ಭರ್ಜರಿ ಜಯ ಸಾಧಿಸಲಿದ್ದಾರೆ ಎಂದು ಮಾಜಿ ಶಾಸಕ ಪ್ರಕಾಶ್ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅ.23ಕ್ಕೆ ನಡೆಯಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಶೀಲ್ ನಮೋಶಿ ಅವರು ಕಣದಲಿದ್ದಾರೆ. ಕ್ಷೇತ್ರದಲ್ಲಿ ಇರುವ ಸುಮಾರು 1,500 ಶಿಕ್ಷಕ ಮತದಾರರ ಪೈಕಿ ಶೇ.80ರಷ್ಟು ಮತಗಳು ಬಿಜೆಪಿ ಅಭ್ಯರ್ಥಿ ನಮೋಶಿ ಅವರು ಪಡೆಯಲಿದ್ದಾರೆ ಎಂದು ಹೇಳಿದರು.
ಕಳೆದ ಮೂರು ಅವಧಿಯಲ್ಲಿ ಗೆಲುವು ಸಾಧಿಸಿರುವ ಶಶೀಲ್ ನಮೋಶಿ ಅವರು ಈ ಭಾಗದ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಈ ಭಾಗಕ್ಕೆ ಮೀಸಲಾತಿ ದೊರೆತಿರುವ 371 (ಜೆ) ಅನುಷ್ಠಾನದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಉದ್ಯೋಗ ನೇಮಕಾತಿಯಲ್ಲಿ ಈ ಭಾಗದ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಯತ್ನ ಮಾಡಿದ್ದಾರೆ. ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಅತ್ಯಂತ ಸರಳ ಸಜ್ಜನಿಕೆಗೆ ಹೆಸರಾಗಿರುವ ನಮೋಶಿ ಅವರು ಶಿಕ್ಷಕರ ಜತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಹಾಗಾಗಿ ಈಗಾಗಲೇ ಬಿಜೆಪಿ ಅಭ್ಯರ್ಥಿ ನಮೋಶಿ ಗೆಲುವಿಗೆ ಶಿಕ್ಷಕ ಮತದಾರರು ನಿರ್ಧರಿಸಿದ್ದಾರೆ ಎಂದರು.
ಕ್ಷೇತ್ರದ ಶಿಕ್ಷಕ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನಮೋಶಿ ಅವರಿಗೆ ಮತ ನೀಡಿ ಭರ್ಜರಿಯಾಗಿ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಜ್ ಗಂದಗೆ, ಪ್ರಮುಖರಾದ ಸುಭಾಷ್ ಬಿರಾದಾರ್, ವೆಂಕಟರಾವ್ ಬಿರಾದಾರ್, ಗೋವಿಂದರಾವ್ ಬಿರಾದಾರ್, ರೇವಣಸಿದ್ದ ಜಾಡರ್ ಹಾಗೂ ಡಾ.ಮಹೇಶ್ ಭಾಲ್ಕೆ ಇದ್ದರು.