ಒತ್ತಡದ ಬದುಕಿಗೆ ಯೋಗವೇ ಸಂಜೀವಿನಿ : ಸಂತೋಷ್ ಬಿ.ಜಿ ಪಾಟೀಲ್
ಭಾಲ್ಕಿ : ದೈಹಿಕ ಆರೋಗ್ಯ, ಮಾನಸಿಕ ನೆಮ್ಮದಿ ಹಾಗೂ ಸಾತ್ವಿಕ ಜೀವನಕ್ಕೆ ಯೋಗವು ಪರಿಣಾಮಕಾರಿ ಮಾರ್ಗವಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ನಿಯಮಿತ ಯೋಗಾಭ್ಯಾಸ ಆರೋಗ್ಯಕರ ಜೀವನಕ್ಕೆ ಸಂಜೀವಿನಿಯಂತೆ ನೆರವಾಗುತ್ತದೆ ಎಂದು ಜೈ ಗುರುದೇವ ಯೋಗ ಟ್ರಸ್ಟ್ನ ಅಧ್ಯಕ್ಷ ಸಂತೋಷ್ ಬಿ.ಜಿ. ಪಾಟೀಲ್ ಹೇಳಿದರು.
ಪಟ್ಟಣದ ದೇವಿನಗರದ ದೇವಿ ಮಂದಿರದಲ್ಲಿ ರವಿವಾರ ನಸುಕಿನ ಜಾವ 5 ಗಂಟೆಗೆ ನವರಾತ್ರಿ ಉತ್ಸವದ ಅಂಗವಾಗಿ ಪತಂಜಲಿ ಯೋಗ ಸಮಿತಿ, ಜೈ ಗುರುದೇವ ಯೋಗ ಟ್ರಸ್ಟ್ ಹಾಗೂ ನವರಾತ್ರಿ ಉತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಯೋಗ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ನಿತ್ಯ ಯೋಗಾಭ್ಯಾಸ ಮಾಡುವುದರಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ಸಾತ್ವಿಕ ಚಿಂತನೆ ಬೆಳೆಸಿಕೊಳ್ಳಬಹುದು ಎಂದರು.
ಪತಂಜಲಿ ಯೋಗ ಸಮಿತಿಯ ತಾಲೂಕು ಸಂಚಾಲಕ ಹರಿದೇವ ರುದ್ರಮುನಿ ಅವರು ಮಾತನಾಡಿ, ಪ್ರತಿದಿನ ಕನಿಷ್ಠ ಒಂದು ಗಂಟೆ ಆರೋಗ್ಯಕ್ಕಾಗಿ ಮೀಸಲಿಡಬೇಕು. ನಿಯಮಿತ ಯೋಗಾಭ್ಯಾಸ ದೇಹವನ್ನು ಸದೃಢವಾಗಿಸುವುದರ ಜೊತೆಗೆ ದಿನನಿತ್ಯದ ಕೆಲಸಗಳನ್ನು ಉತ್ಸಾಹದಿಂದ ನಿರ್ವಹಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ದೇವಸ್ಥಾನದ ಅಧ್ಯಕ್ಷ ದಿಲೀಪ್ ಢವಳೆ ಅವರು ಮಾತನಾಡಿ, ನವರಾತ್ರಿ ಉತ್ಸವದ ಅಂಗವಾಗಿ ಪ್ರತಿವರ್ಷ ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ಶಿಬಿರದಲ್ಲಿ ಯೋಗ ಶಿಕ್ಷಕ ಪಂಡಿತ್ ಪಾಟೀಲ್, ಚಂದ್ರಕಾಂತ್ ಹೈಬತಪುರೇ, ಮಂಗಲಾ ಕಾಡಾದೆ, ರಮೇಶ್ ಬರ್ಮಾ ಹಾಗೂ ಸಿಂಧೂ ಹರಿದೇವ್ ಅವರು ವಿವಿಧ ಯೋಗಾಸನ, ಪ್ರಾಣಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡಿದರು. ನೂರಾರು ಜನರು ಶಿಬಿರದಲ್ಲಿ ಭಾಗವಹಿಸಿ ಯೋಗಾಭ್ಯಾಸದ ಪ್ರಯೋಜನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸೂರ್ಯಕಾಂತ್ ಬಿರಾದಾರ್, ನೀಲಕಂಠ್ ಬಿರಾದಾರ್, ಸುರೇಶ್ ಕಾಳೆ, ಕಲ್ಲಪ್ಪ ಪಂಡರಗೆರೆ, ಸೋಮನಾಥ್ ಪಾಟೀಲ್, ನಿರಂಜಪ್ಪ ಪಾತ್ರೆ, ಶಿವಾನಂದ್ ಗಂದಗೆ, ರಾಜಶೇಖರ್ ಪಾಟೀಲ್, ಈಶ್ವರ್ ಪಾಟೋದೆ, ಮುರಳಿಧರ್ ತೋರಖಡೇ, ಧನರಾಜ್ ಹಾಗೂ ಆರತಿ ಮೇತ್ರೆ ಸೇರಿದಂತೆ ಯೋಗ ಸಮಿತಿ ಹಾಗೂ ನವರಾತ್ರಿ ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.