ಬೀದರ್: ನಾಲ್ವರು ಮಕ್ಕಳ ಸಹಿತ ಕಾಲುವೆಗೆ ಹಾರಿದ ದಂಪತಿ; ನಾಲ್ವರು ಮೃತ್ಯು
ಮಹಿಳೆ, ಓರ್ವ ಪುತ್ರನ ರಕ್ಷಣೆ
ಬೀದರ್: ನಾಲ್ಕು ಮಕ್ಕಳ ಸಹಿತ ದಂಪತಿ ಕಾಲುವೆಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದು, ಘಟನೆಯಲ್ಲಿ ತಂದೆ ಹಾಗೂ ಮೂವರು ಮಕ್ಕಳ ಸಹಿತ ನಾಲ್ವರು ಮೃತಪಟ್ಟಿದ್ದು, ಮಹಿಳೆ ಹಾಗೂ ಒರ್ವ ಬಾಲಕನ್ನು ರಕ್ಷಿಸಿದ ಘಟನೆ ಭಾಲ್ಕಿ ತಾಲ್ಲೂಕಿನ ಮರೂರ್ ಗ್ರಾಮದಲ್ಲಿ ನಡೆದಿದೆ.
ಬೀದರ್ ನ ಮೈಲೂರ್ ನಿವಾಸಿಯಾದ ಶಿವಮೂರ್ತಿ (45), ಅವರ ಮಕ್ಕಳಾದ ಶ್ರೀಶಾಂತ್ (9), ರೀತಿಕ್ (7) ಹಾಗೂ 7 ತಿಂಗಳ ಮಗು ರಾಕೇಶ್ ಮೃತಪಟ್ಟಿದ್ದಾರೆ. ಶಿವಮೂರ್ತಿ ಅವರ ಪತ್ನಿ ರಮಾಬಾಯಿ ಹಾಗೂ ಓರ್ವ ಪುತ್ರ ಬದುಕುಳಿದಿದ್ದಾರೆ.
ಕುಟುಂಬವು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗಂಡ, ಹೆಂಡತಿ ಸೇರಿ ಮಕ್ಕಳೆಲ್ಲರೂ ಮರೂರ್ ಗ್ರಾಮದಲ್ಲಿರುವ ಕಾಲುವೆಗೆ ಹಾರಿದ್ದಾರೆ. ಅದರಲ್ಲಿ ಓರ್ವ ಬಾಲಕ ತನ್ನ ತಾಯಿಯ ಕೂದಲು ಹಿಡಿದು ಎಳೆದು ಚಿರಾಡಿದ್ದಾನೆ. ಅಷ್ಟರಲ್ಲಿಯೇ ಸ್ಥಳೀಯ ಯುವಕನೋರ್ವ ಬಂದು ಇಬ್ಬರನ್ನು ರಕ್ಷಿಸಿದ್ದಾನೆ.
ಸಾಲಬಾದೆಯಿಂದ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಸಾಲಗಾರರಿಗೆ ಹೆದರಿ ಕೆಲ ದಿನಗಳು ಈ ಕುಟುಂಬಸ್ಥರು ಬೇರೆ ಊರಲ್ಲಿ ಉಳಿದಿದ್ದರು ಎನ್ನಲಾಗಿದೆ.
ರವಿವಾರ ಮೃತ ವ್ಯಕ್ತಿ ಶಿವಮೂರ್ತಿ ಅವರ ತಾಯಿ ನಿಧನ ಹೊಂದಿದ್ದು, ಸೋಮವಾರ ಅವರ ಅಂತ್ಯಕ್ರಿಯೆ ನಡೆದಿದೆ. ಆದರೆ ಸಾಲಗಾರರಿಗೆ ಹೆದರಿ ಅಂತ್ಯಕ್ರಿಯೆಗೂ ಕುಟುಂಬ ಬಂದಿಲ್ಲ ಎನ್ನಲಾಗಿದೆ. ಇಂದು (ಮಂಗಳವಾರ) ಮರೂರ್ ಗ್ರಾಮಕ್ಕೆ ಬಂದ ಕುಟುಂಬ, ಆ ಗ್ರಾಮದಲ್ಲಿರುವ ಕಾಲುವೆಗೆ ಹಾರಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯು ಧನ್ನೂರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಪೋಲೀಸರು ಕಾಲುವೆಯಿಂದ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.