×
Ad

ಬೀದರ್ | ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಲು ಆಗ್ರಹಿಸಿ ಪ್ರತಿಭಟನೆ

Update: 2026-01-22 18:27 IST

ಬೀದರ್ : ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಐ ಪಕ್ಷ ಹಾಗೂ ರೈತ ಸಂಘರ್ಷ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರಿಗೆ ಗುರುವಾರ ಸಿಪಿಐ ಪಕ್ಷ ಹಾಗೂ ರೈತ ಸಂಘರ್ಷ ಸಮನ್ವಯ ಸಮಿತಿಯ ನೂರಾರು ಜನರು ಜಮಾವಣೆಗೊಂಡು ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು ಎಂದು ಘೋಷಣೆ ಕೂಗಿದರು. ನಂತರ ಅಂಬೇಡ್ಕರ್ ವೃತ್ತದ ಮೂಲಕ ಸಹಾಯಕ ಆಯುಕ್ತರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ, ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಸಚಿವ ಮತ್ತು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೀದರ್ ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿದಾರರನ್ನು ಸಕ್ರಮಗೊಳಿಸಬೇಕು. ಫಾರಂ ನಂ.57 ಸಲ್ಲಿಕೆಗೆ ಅವಧಿ ವಿಸ್ತರಿಸಬೇಕು. ಅಕ್ರಮ–ಸಕ್ರಮ ಸಮಿತಿ ಸಭೆಗಳನ್ನು ತಕ್ಷಣ ಕರೆಯಬೇಕು ಎಂದು ಒತ್ತಾಯಿಸಲಾಗಿದೆ.

ಫಾರಂ ನಂ.50, 53 ಹಾಗೂ 57 ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದರಿಂದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳು ವಿಲೇವಾರಿ ಮಾಡಲಿಲ್ಲ. ಸರ್ಕಾರ ಸಾಗುವಳಿ ಚೀಟಿಯನ್ನು ಫಾರಂ ನಂ.7 ರಲ್ಲಿ ನೀಡಿದ್ದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇಲ್ಹಾಳ, ಹೊನ್ನಿಕೇರಿ, ಕಪಲಾಪೂರ (ಜೆ), ಬೇಳಕೇರಾ, ಶಮಶಾನಗರ, ಟಿ. ಮಿರ್ಜಾಪೂರ, ಜಕನಾಳ, ಬೇಮಳಖೇಡಾ, ನಂದಿಹಾಳ, ಸುಂಧಾಳ, ಹಂದಿಕೇರಾ ಹಾಗೂ ಕೋನ ಮೇಳಕುಂದಾ ಸೇರಿದಂತೆ ಇನ್ನು ಹಲವಾರು ಗ್ರಾಮಗಳಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಕಿರುಕುಳ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ ಸಾವಿರಾರು ಎಕರೆ ಭೂಮಿ ನೀಡುತ್ತಿರುವಾಗ, ಬಡ ಜನರು ದಶಕಗಳಿಂದ ಉಳುಮೆ ಮಾಡುತ್ತಿರುವ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ದೂರಲಾಗಿದೆ.

ತಕ್ಷಣವೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಗರ್ ಹುಕುಂ ಅಕ್ರಮ-ಸಕ್ರಮ ಸಮಿತಿ ಸಭೆ ನಡೆಸಿ, ಫಾರಂ ನಂ. 50, 53 ಮತ್ತು 57 ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ನಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡದಿದ್ದಲ್ಲಿ ಫೆ.12 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯ ಬಾಬುರಾವ್ ಹೊನ್ನಾ, ಜಿಲ್ಲಾ ಕಾರ್ಯದರ್ಶಿ ನಜೀರ್ ಅಹ್ಮದ್, ಸರ್ವೋದಯ ಪಕ್ಷದ ಅಧ್ಯಕ್ಷ ಕೋಂಡಿಬಾ ಪಾಂಡ್ರೆ, ಬಸವರಾಜ್ ಅಷ್ಟೂರೆ, ಸೂರ್ಯಕಾಂತ್ ಮದಕಟ್ಟಿ, ಜೈಶೀಲಕುಮಾರ್, ಶೀಲಾ ಸಾಗರ್, ಮೋಹಿದಮಿಯ್ಯಾ, ವೀರಶೆಟ್ಟಿ ವಟಂಬೆ, ಘಾಳೆಪ್ಪಾ ಕಪಲಾಪೂರ್, ಪ್ರಭು ಹುಚಕನಳ್ಳಿ, ಪ್ರಭು ತಗಣಿಕರ್, ಚಂದ್ರಕಾಂತ್ ಬರ್ದಾಪೂರ್, ಶಫಾಯತ್‌ ಅಲಿ, ಶಿವಮೂರ್ತಿ, ವಿಠಲ್, ಸೂರ್ಯಕಾಂತ್ ಬರ್ದಾಪೂರ್ ಹಾಗೂ ಮುನಿರೋದ್ದೀನ್ ಬಗದಲ್ ಹಾಗೂ ಖದೀರಮಿಯ್ಯಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News