ಮಹಿಳಾ ಸಬಲೀಕರಣಕ್ಕೆ ಸರಕಾರ ಬದ್ಧ : ಸಿಎಂ ಡಿ.ಕೆ.ಶಿವಕುಮಾರ್
"ಭಾರತ ಜೋಡೋ ಯುವ ಶಕ್ತಿ ಸಂಘ ರಚಿಸಲು ತೀರ್ಮಾನ"
ಬೀದರ್ : ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಮಹಿಳೆಯರ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣಕ್ಕೆ ಸಂಪೂರ್ಣ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಸೋಮವಾರ ನಡೆದ ಅಕ್ಕಪಡೆ – ಮಹಿಳೆಯರ ಶಕ್ತಿ ಪ್ರದರ್ಶನ ಮತ್ತು ಆತ್ಮರಕ್ಷಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಹೆಣ್ಣು ಎಂದರೆ ಧೈರ್ಯ, ಭೂಮಿ, ಭರವಸೆ, ಒಗ್ಗಟ್ಟು ಮತ್ತು ಬೆಳಕು. ನಾರಿ ಶಕ್ತಿಯೇ ದೇಶದ ಬಹುದೊಡ್ಡ ಶಕ್ತಿ ಎಂದು ಹೇಳಿದರು.
ಮಹಿಳೆಯರ ಸುರಕ್ಷತೆ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಅಕ್ಕಪಡೆ ಸ್ಥಾಪಿಸಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಯತ್ನದಿಂದ ಅದು ರಾಜ್ಯಾದ್ಯಂತ ವಿಸ್ತರಿಸಿದೆ ಎಂದು ತಿಳಿಸಿದರು.
ಮಹಿಳೆಯರಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಅವಕಾಶ ಕಲ್ಪಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಹಿಳೆಯರ ಸಂಘಟನೆಗಳು ಬಲಿಷ್ಠವಾಗಬೇಕು. ಮಹಿಳೆಯರು ಪಂಚಾಯಿತಿಯಿಂದ ಸಂಸತ್ತಿನವರೆಗೆ ನಾಯಕತ್ವ ವಹಿಸುವಂತಾಗಬೇಕು ಎಂದು ಕರೆ ನೀಡಿದರು.
ಮಹಿಳೆಯರ ಜೀವನದಲ್ಲಿ ಬದಲಾವಣೆ ತರಲು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಯುವಜನರ ಸಂಘಟನೆಯಾಗಿ ಭಾರತ ಜೋಡೋ ಯುವ ಶಕ್ತಿ ಸಂಘ ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ತಿಳಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಸಂಸದ ಸಾಗರ್ ಖಂಡ್ರೆ , ಶಾಸಕರಾದ ರಹೀಮ್ ಖಾನ್, ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ್, ಮಾಲಾ ಬಿ ನಾರಾಯಣ, ಎಲ್. ಕೆ ಅತಿಕ್, ವಿಜಯ ಸಿಂಗ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗಿರೀಶ್ ಬಡೋಲೆ, ಎಸ್ಪಿ ಪ್ರದೀಪ್ ಗುಂಟಿ ಹಾಗೂ ಅಕ್ಕ ಪಡೆಯ ರಾಜ್ಯ ಸಲಹೆಗಾರ್ತಿ ಶೈನಿ ಗುಂಟಿ ಸೇರಿದಂತೆ ಹಲವಾರು ನಾಯಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಸವಕಲ್ಯಾಣ ನಗರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್, ಡಾ. ಬಿ.ಆರ್. ಅಂಬೇಡ್ಕರ್, ಬಸವೇಶ್ವರ ಹಾಗೂ ಮಹಾತ್ಮ ಬೊಮ್ಮಗೊಂಡೇಶ್ವರ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ರಾಜಾ ಬಕ್ಷರ್ ದರ್ಗಾಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.