×
Ad

ಹುಲಸೂರ್ | ಯಲ್ಲಮವಾಡಿಯಲ್ಲಿ ನಾಯಿಗಳ ದಾಳಿ : 7 ಮೇಕೆಗಳು ಸಾವು, ಹೋರಿಗಳಿಗೆ ಗಾಯ

Update: 2026-06-26 20:27 IST

ಹುಲಸೂರ್ : ನಾಯಿಗಳ ಗುಂಪೊಂದು ಪಶು ಶೆಡ್‌ಗೆ ನುಗ್ಗಿ ದಾಳಿ ನಡೆಸಿದ ಪರಿಣಾಮ ಏಳು ಮೇಕೆಗಳು ಮೃತಪಟ್ಟಿದ್ದು, ಹೋರಿಗಳು ಗಾಯಗೊಂಡ ಘಟನೆ ತಾಲೂಕಿನ ಯಲ್ಲಮವಾಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ರೈತ ಪ್ರಲ್ಹಾದ್ ಗುಜೆ ಅವರ ಜಮೀನಿನಲ್ಲಿರುವ ಪಶು ಶೆಡ್‌ಗೆ ನುಗ್ಗಿದ ನಾಯಿಗಳ ಗುಂಪು ಮೇಕೆಗಳು ಮತ್ತು ಹೋರಿಗಳ ಮೇಲೆ ದಾಳಿ ನಡೆಸಿದೆ.

ಘಟನೆ ನಡೆದ ವೇಳೆ ರೈತ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬಳಿಕ ಶೆಡ್‌ಗೆ ತೆರಳಿದಾಗ ರಕ್ತದ ಕಲೆಗಳು, ಸತ್ತು ಬಿದ್ದ ಮೇಕೆಗಳು, ಗಾಯಗೊಂಡ ಜಾನುವಾರುಗಳು ಹಾಗೂ ಶೆಡ್‌ನೊಳಗಿನ ಅವ್ಯವಸ್ಥೆ ಕಂಡುಬಂದಿದೆ. ಇದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ರೈತರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಗಾಯಗೊಂಡ ಜಾನುವಾರುಗಳಿಗೆ ತಕ್ಷಣವೇ ಚಿಕಿತ್ಸೆ ನೀಡಲಾಯಿತು.

ಹಿರಿಯ ಪಶುವೈದ್ಯಾಧಿಕಾರಿ ಡಾ. ಅಚ್ಯುತ್ ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ ನಾಯಿಗಳ ದಾಳಿಯಿಂದಲೇ ಮೇಕೆಗಳು ಮೃತಪಟ್ಟಿರುವುದು ದೃಢಪಟ್ಟಿದ್ದು, ಮೊದಲ ಹಂತದ ವರದಿಯನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಈ ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜಾನುವಾರುಗಳ ಸುರಕ್ಷತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಲ್ಲದೆ, ಮೃತಪಟ್ಟ ಮೇಕೆಗಳ ನಷ್ಟದ ಪಂಚನಾಮೆ ನಡೆಸಿ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News