Bidar | ಜೂ.28ರ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ನ್ಯಾಯಾಲಯದಿಂದ ಷರತ್ತುಬದ್ಧ ಅನುಮತಿ
ಕನ್ನೇರಿ ಶ್ರೀಗಳಿಗೆ ಭಾಷಣಕ್ಕೆ ನಿರ್ಬಂಧ
ಸಾಂದರ್ಭಿಕ ಚಿತ್ರ (AI)
ಬೀದರ್: ಜೂನ್ 28ರಂದು ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ನ್ಯಾಯಾಲಯ ಷರತ್ತುಬದ್ಧ ಅನುಮತಿ ನೀಡಿದ್ದು, ಈ ಸಂಬಂಧ ಆದೇಶ ಹೊರಡಿಸಿದೆ.
ಸಮಾವೇಶಕ್ಕೆ ಲಿಂಗಾಯತ ಮಠಾಧೀಶರು ಹಾಗೂ ವಿವಿಧ ಲಿಂಗಾಯತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಬಸವಕಲ್ಯಾಣ ತಾಲೂಕು ಆಡಳಿತ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆಯೋಜಕರು ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಸಮಾವೇಶಕ್ಕೆ ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಿದೆ.
ನ್ಯಾಯಾಲಯದ ಆದೇಶದಂತೆ ಕನ್ನೇರಿ ಸ್ವಾಮೀಜಿಗಳಿಗೆ ಕಾರ್ಯಕ್ರಮದಲ್ಲಿ ಭೌತಿಕವಾಗಿ ಹಾಜರಾಗಲು ಅವಕಾಶ ನೀಡಲಾಗಿದೆ. ಆದರೆ, ಅವರು ಸಮಾವೇಶದಲ್ಲಿ ಭಾಷಣ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.
ಇದೇ ವೇಳೆ ಕಾರ್ಯಕ್ರಮದಲ್ಲಿ ಯಾವುದೇ ವ್ಯಕ್ತಿ ದ್ವೇಷ ಭಾಷಣ ಮಾಡಬಾರದು. ರಾಜಕೀಯ, ಧಾರ್ಮಿಕ ಅಥವಾ ಯಾವುದೇ ಜನಾಂಗ, ವ್ಯಕ್ತಿ ಅಥವಾ ಗುಂಪಿನ ವಿರುದ್ಧ ಅವಹೇಳನಕಾರಿ, ನಿಂದನಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ಕಾರ್ಯಕ್ರಮದ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಕೃತ್ಯ ನಡೆಯಬಾರದು. ಸರ್ಕಾರಿ ಅಥವಾ ಖಾಸಗಿ ಆಸ್ತಿಗೆ ಹಾನಿ ಉಂಟುಮಾಡುವಂತಿಲ್ಲ. ಸಮಾವೇಶವನ್ನು ಶಾಂತಿಯುತವಾಗಿ ನಡೆಸಬೇಕಿದ್ದು, ಮೆರವಣಿಗೆಗೆ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಸುಮಾರು 2,500 ಮಂದಿ ಭಾಗವಹಿಸುವ ಸಾಧ್ಯತೆ ಇರುವುದಾಗಿ ಅಂದಾಜಿಸಲಾಗಿದೆ. ಒಂದು ವೇಳೆ ಕಾರ್ಯಕ್ರಮದ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ, ಅದರ ಸಂಪೂರ್ಣ ಹೊಣೆಯನ್ನು ಸಂಘಟಕರು ಹೊರುವಂತೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.