Bidar | 9.41 ಕೋಟಿ ರೂ. ಗಿಂತಲೂ ಹೆಚ್ಚು ಮೌಲ್ಯದ ಮಾದಕ ವಸ್ತು ನಾಶ
ಬೀದರ್: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸುಮಾರು 9.41 ಕೋಟಿ ರೂ. ಮೌಲ್ಯದ ಅಕ್ರಮ ಗಾಂಜಾ, ಮಾದಕ ಗುಳಿಗೆಗಳು ಹಾಗೂ ಸಿರಫ್ ಬಾಟಲ್‌ಗಳನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿ ವತಿಯಿಂದ ಗುರುವಾರ ನಾಶಗೊಳಿಸಲಾಯಿತು.
ಭಾಲ್ಕಿ ತಾಲೂಕಿನ ಧನ್ನೂರ್ ಗ್ರಾಮದಲ್ಲಿರುವ ಮೇ ಇನೈರೋ ಬಯೋಟಿಕ್ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಯಿತು.
ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುವುದು, ಸಾಗಾಟ ಹಾಗೂ ಮಾರಾಟ ಮಾಡುತ್ತಿದ್ದವರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿದ್ದವು.
ಈ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 997 ಕೆಜಿ 764 ಗ್ರಾಂ ಗಾಂಜಾ, 51,638 ಮಾದಕ ಗುಳಿಗೆಗಳು ಹಾಗೂ 743 ಸಿರಫ್ ಬಾಟಲ್‌ಗಳನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿಯ ಮೇಲ್ವಿಚಾರಣೆಯಲ್ಲಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.