SIR ರದ್ದುಗೊಳಿಸುವಂತೆ ಒತ್ತಾಯಿಸಿ ಸೆ.1ರಂದು ರಾಜ್ಯ ಚುನಾವಣಾ ಆಯೋಗದ ಕಚೇರಿ ಮುತ್ತಿಗೆ: ಓಂಪ್ರಕಾಶ್ ರೊಟ್ಟೆ
ಬೀದರ್ : ಎಸ್‌ಐಆರ್ ರದ್ದುಗೊಳಿಸುವಂತೆ ಒತ್ತಾಯಿಸಿ ಎಸ್‌ಐಆರ್ ವಿರೋಧಿ ಕರ್ನಾಟಕ, ಎದ್ದೇಳು ಕರ್ನಾಟಕ ಹಾಗೂ ಜನಪರ ಸಂಘಟನೆಗಳ ಒಕ್ಕೂಟದಿಂದ ಸೆ.1 ರಂದು ಬೆಂಗಳೂರಿನ ಫ್ರೀಡ್ಂ ಪಾರ್ಕ್‌ನಿಂದ ಪಾದಯಾತ್ರೆ ಹೊರಟು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಘಟನಾ ಸಂಚಾಲಕ ಓಂಪ್ರಕಾಶ್ ರೊಟ್ಟೆ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆ ಸಂಪೂರ್ಣವಾಗಿ ಸಂವಿಧಾನದ ವೀರೋಧಿಯಾಗಿದ್ದು, ಲಕ್ಷಾಂತರ ಜನರನ್ನು ಮತದಾನದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಹಾಗಾಗಿ ಸೆ.1 ರಂದು ರಾಜ್ಯ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲಾಗುತ್ತಿದೆ ಎಂದರು.
ಬಿಎಲ್‌ಒ ಗಳಿಗೆ ಸರಿಯಾಗಿ ತರಬೇತಿ ನೀಡಲಿಲ್ಲ. ಆದ್ದರಿಂದ ಎನ್ಯುಮರೇಷನ್ ಫಾರಮ್ ಅನ್ನು ಅದೆಷ್ಟೋ ಜನರು ಸರಿಯಾಗಿ ತುಂಬಲು ಸಾಧ್ಯವಾಗಲಿಲ್ಲ. ಎಸ್‌ಐಆರ್ ನಿಂದಾಗಿ ಬಡವರು, ಶೋಷಿತರು ವಂಚನೆಗೆ ಒಳಗಾಗಿದ್ದಾರೆ. ಹಾಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲಾಗುತ್ತಿದೆ. ಅದೇ ರೀತಿ ನಮ್ಮ ಮನವಿಗೆ ಸ್ಪಂದನೆ ಮಾಡದಿದ್ದರೆ ಅ.2 ರ ಗಾಂಧಿ ಜಯಂತಿಯ ದಿನದಂದು ದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ಮುಹಮ್ಮದ್ ನಿಝಾಮುದ್ದಿನ್ ಅವರು ಮಾತನಾಡಿ, ಎಸ್‌ಐಆರ್‌ನಿಂದ ಬೆಂಗಳೂರಿನಂಥ ನಗರಗಳಲ್ಲಿ ಶೇ.50 ಕ್ಕಿಂತಲೂ ಹೆಚ್ಚಿನ ಜನರು ಮತದಾನದ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ರಾಜ್ಯದಲ್ಲಿ 43 ಲಕ್ಷಕ್ಕಿಂತಲೂ ಹೆಚ್ಚಿನ ಜನರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ನೋಟಿಸ್ ನೀಡದೇ ಇನ್ನು 6 ತಿಂಗಳ ಕಾಲ ಕಾಲಾವಕಾಶ ನೀಡಬೇಕು. ಹಾಗೆಯೇ ಗ್ರಾಮ ಸಭೆಗಳನ್ನು ಮಾಡುವ ಮೂಲಕ ನಿಜವಾದ ಮತದಾರರನ್ನು ಮತದಾನದ ಪಟ್ಟಿಯಿಂದ ಕೀ ಬಿಡದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ವಿಠ್ಠಲದಾಸ್ ಪ್ಯಾಗೆ ಅವರು ಮಾತನಾಡಿ, ಕೇಂದ್ರ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಸಂವಿಧಾನದ ಸಮಾನತೆಯ ಸಿದ್ಧಾಂತ ನಾಶ ಮಾಡಿ ಹಿಂದುತ್ವದ ಸಿದ್ಧಾಂತ ಜಾರಿಗೊಳಿಸಲು ಹೊರಟಿದೆ. ಆದ್ದರಿಂದಾಗಿ ಎಸ್‌ಐಆರ್ ರದ್ದುಗೊಳಿಸಬೇಕು ಎಂದು ಮುತ್ತಿಗೆ ಹಾಕಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ರಾಜ್ಯ ಕಾರ್ಯದರ್ಶಿ ಮಾರುತಿ ಬೌದ್ಧೆ, ಆರ್‌ಪಿಐ ಪಕ್ಷದ ಮಹೇಶ್ ಗೋರನಾಳಕರ್, ಆಪ್ ಪಕ್ಷದ ಜಿಲ್ಲಾಧ್ಯಕ್ಷ ಸಿದ್ಧು ಫುಲಾರಿ ಹಾಗೂ ಸಂತೋಷ್ ಜೋಳದಾಪಕೆ ಉಪಸ್ಥಿತರಿದ್ದರು.