‘ಶಾಹೀನ್ ವಿಶೇಷ ವಿದ್ಯಾರ್ಥಿ ವೇತನ': ಕನ್ನಡ-ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ನೂತನ ಯೋಜನೆ ಜಾರಿ
ಸಾಂದರ್ಭಿಕ ಚಿತ್ರ
ಬೀದರ್ : ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ರಾಜ್ಯದ ಸರಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ‘ಶಾಹೀನ್ ವಿಶೇಷ ವಿದ್ಯಾರ್ಥಿ ವೇತನ' ಯೋಜನೆ ಜಾರಿಗೊಳಿಸಲು ನಿರ್ಧರಿಸಿದೆ.
ಈ ವರ್ಷ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ರಾಜ್ಯದ 20 ಪದವಿಪೂರ್ವ ವಿಜ್ಞಾನ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಒಟ್ಟು 470 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಲಾಗುವುದು.
ಎಸೆಸೆಲ್ಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ಸರಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಸಮೂಹದ ಆಯಾ ಶಾಖೆಗಳಲ್ಲಿ ಅಥವಾ ಆನ್‍ಲೈನ್‍ನಲ್ಲಿ (www.shaheengroup.org) ಮೇ 15 ರೊಳಗೆ ಅರ್ಜಿ ಸಲ್ಲಿಸಬಹುದು.
ಮೇ 18 ರಂದು ಆಯಾ ಶಾಖೆಗಳಲ್ಲಿ ಸಂದರ್ಶನ ನಡೆಯಲಿದೆ. ಅರ್ಹತೆ ಆಧಾರದಲ್ಲಿ ಆಯ್ಕೆ ಜರುಗಲಿದೆ. ಗ್ರಾಮೀಣ ಭಾಗದ, ವಿಶೇಷ ಚೇತನ ಹಾಗೂ ಅನಾಥ ಮಕ್ಕಳಿಗೆ ವಿಶೇಷ ಆದ್ಯತೆ ಕೊಡಲಾಗುವುದು. ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಕಾಲೇಜು ಶುಲ್ಕದಲ್ಲಿ ಶೇ.75 ರಷ್ಟು ರಿಯಾಯಿತಿ ಸಿಗಲಿದೆ.
ಶಾಹೀನ್ ಕಾಲೇಜಿನ 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ತೇರ್ಗಡೆ ಹಾಗೂ ಸಾಧನೆ ಪ್ರಮಾಣ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗಿಂತ ಶೇ.13 ರಷ್ಟು ಹೆಚ್ಚಿದೆ. ಉರ್ದು ಮಾಧ್ಯಮ ವಿದ್ಯಾರ್ಥಿಗಳು ಮೂರನೇ ಸ್ಥಾನದಲ್ಲಿದ್ದಾರೆ. ಇತರ ವಿದ್ಯಾರ್ಥಿಗಳಿಗಿಂತ ಹಾಸ್ಟೆಲ್ ವಿದ್ಯಾರ್ಥಿಗಳ ಸಾಧನೆ ಹೆಚ್ಚಿದೆ.
ಸರಕಾರಿ ಕನ್ನಡ ಹಾಗೂ ಉರ್ದು ಮಾಧ್ಯಮದ ವಿದ್ಯಾರ್ಥಿಗಳನ್ನು ಸಾಧನೆಗೆ ಪ್ರೇರೇಪಿಸಲು ವಿದ್ಯಾರ್ಥಿ ವೇತನ ಯೋಜನೆ ರೂಪಿಸಲಾಗಿದೆ. ಶಿಷ್ಯವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಶಾಹೀನ್ ಕಾಲೇಜು ಶಾಖೆ ಮತ್ತು ಮೊಬೈಲ್ ನಂಬರ್ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.