ಬೇನಚಿಂಚೋಳಿ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಗೆ ಗ್ರಾಮಸ್ಥರ ಮನವಿ
ಹುಮನಾಬಾದ್: ತಾಲೂಕಿನ ಬೇನಚಿಂಚೋಳಿ ಗ್ರಾಮಕ್ಕೆ ವಿದ್ಯುತ್ ಸಮರ್ಪಕ ಪೂರೈಕೆ, ದೇವಸ್ಥಾನಕ್ಕೆ ಹೋಗುವ ದಾರಿ ವ್ಯವಸ್ಥೆ ಸೇರಿ ನಾನಾ ಸಮಸ್ಯೆಗಳನ್ನು ಬಗೆಹರಿಸುವಂತೆ ಪಟ್ಟಣದ ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಮಂಗಳವಾರ ಬೇನಚಿಂಚೋಳಿ ಗ್ರಾಮಸ್ಥರು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರಿಗೆ ಮನವಿ ಮಾಡಿದರು.
ಈ ವೇಳೆ ಬೇನಚಿಂಚೋಳಿ ಗ್ರಾಮದ ಮುಖಂಡ ಮಂಜುನಾಥ್ ಖೇರೋಜಿ ಅವರು ಮಾತನಾಡಿ, ಕಳೆದ ಬಹುತೇಕ ದಿನಗಳಿಂದ ಬೇನಚಿಂಚೋಳಿ ರೈತರ ಹೊಲಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗದ ಕಾರಣ ಬೆಳೆಗಳು ಒಣಗುತ್ತಿವೆ. ಇದರಿಂದಾಗಿ ರೈತರು ಹಾಗೂ ಜಾನುವಾರುಗಳು ಅನೇಕ ಸಮಸ್ಯೆಗಳನ್ನು ಎದುರಿಸುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ತಮ್ಮ ಅಳಲು ತೊಡಿಕೊಂಡರು.
ಇತಿಹಾಸ ಪ್ರಸಿದ್ಧ ತುಕಾರಾಮ್ ಮಹಾರಾಜರ ಮಠಕ್ಕೆ ತೆರಳಲು ದಾರಿಯ ಸಮಸ್ಯೆ ಇದೆ. ಹೀಗಾಗಿ ಬೇನಚಿಂಚೋಳಿ ಗ್ರಾಮಸ್ಥರ ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳ ಜತೆಯಲ್ಲಿ ಮಾತನಾಡಿ ನಮ್ಮ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಬೇನಚಿಂಚೋಳಿ ಗ್ರಾಮದ ರೈತರ ಹೊಲಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ತುಕಾರಾಮ್ ಮಹಾರಾಜರ ಮಠಕ್ಕೆ ಹೋಗಲು ದಾರಿಯ ವ್ಯವಸ್ಥೆ ಕುರಿತು ಅಧಿಕಾರಿಗಳ ಜತೆಗೆ ಮಾತನಾಡಿ ರೈತರ ಹಾಗೂ ಗ್ರಾಮಸ್ಥರ ಬೇಡಿಕೆಗಳು ಈಡೇರಿಸಲಾಗುವುದು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಳಿರಾಮ್ ಜಮಾದಾರ್, ಪುಂಡಲಿಕ್ ಭಂಡಾರಿ, ಶಿವಶರಣ್ ಕಟ್ಟಿಮನಿ, ಭೀಮಶಾ ಬೀರ್ಗಿ, ಪಂಡಿತ್ ಪಾಟೀಲ್, ತುಕಾರಾಮ್ ಬಡಿಗೇರ್, ಮಲ್ಲಿಕಾರ್ಜುನ್ ದಂಡೆ, ರಾಜು ಕಟ್ಟಿಮನಿ, ಯೋಗೇಶ್ ವರ್ಮಾ, ಅಂಬಣ್ಣಾ ಹಣಕುಣಿ ಹಾಗೂ ನಾಗಣ್ಣಾ ಮೇತ್ರೆ ಸೇರಿ ಇತರರಿದ್ದರು.