×
Ad

ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಜಾಥಾ : ತಾಹಿರ್ ಹುಸೇನ್

Update: 2025-10-11 17:12 IST

ಬೀದರ್ : ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ನಡೆಸುತ್ತಿರುವ ನಮ್ಮ ಜಾಥಾ ಅ. 6 ರಂದು ಬಳ್ಳಾರಿಯಲ್ಲಿ ಪ್ರಾರಂಭವಾಗಿ ಇಂದು ಬೀದರ್ ತಲುಪಿದೆ. ಅ. 13 ರಂದು ಕಲ್ಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ ಮೂಲಕ ಕೊನೆಗೊಳ್ಳಲಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ತಿಳಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2013 ರಲ್ಲಿ ಹೈದರಾಬಾದ್‌ ಕರ್ನಾಟಕ ಭಾಗಕ್ಕೆ 371 (ಜೆ) ವಿಶೇಷ ಸ್ಥಾನಮಾನ ನೀಡಲಾಯಿತು. 2019 ರಲ್ಲಿ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾವಣೆ ಮಾಡಲಾಯಿತು. ಈ ಭಾಗದ ಸಮಸ್ಯೆಗಳು ಬಗೆಹರಿಸದೆ ಬರೀ ಕಲ್ಯಾಣ ಎಂದು ಹೆಸರು ಬದಲಾವಣೆ ಮಾಡಿದರೆ ಈ ಭಾಗ ಅಭಿವೃದ್ಧಿಯಾಗುವುದಿಲ್ಲ ಎಂದು ಗುಡುಗಿದರು.

ಕಲ್ಯಾಣ ಕರ್ನಾಟಕ ಭಾಗವು ಎಲ್ಲ ಕ್ಷೇತ್ರದಲ್ಲಿ ದಕ್ಷಿಣ ಕರ್ನಾಟಕಕ್ಕಿಂತ ಹಿಂದುಳಿದ ಪ್ರದೇಶವಾಗಿದೆ. ಬೆಂಗಳೂರಿನ ತಲಾದಾಯ 5.1 ಆಗಿದೆ. ಆದರೆ ಕಲ್ಯಾಣ ಕರ್ನಾಟಕದ್ದು ಬರೀ 1.73 ಮಾತ್ರ ಆಗಿದೆ. ಈ ಭಾಗದ ಯಾದಗಿರಿ, ರಾಯಚೂರು, ಕಲಬುರ್ಗಿ ಮತ್ತು ಕೊಪ್ಪಳ ರಾಜ್ಯದಲ್ಲಿಯೇ ಅತ್ಯಂತ ಬಡ ಜಿಲ್ಲೆಯಾಗಿವೆ. ಇಲ್ಲಿನ ಯುವಕರು ಉದ್ಯೋಗ ಸಿಗದೆ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಿಲ್ಲ. ಅಪೌಷ್ಟಿಕತೆಯಿಂದ ಮಕ್ಕಳು ಮತ್ತು ಬಾಣಂತಿಯರು ಹೆಚ್ಚಾಗಿ ಸಾಯುತ್ತಿದ್ದಾರೆ. ರೈತರ ಆತ್ಮಹತ್ಯೆಗಳು ನಿಲ್ಲುತಿಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸರಕಾರ ಇತ್ತ ಗಮನ ಹರಿಸುತ್ತಿಲ್ಲ. 12 ವರ್ಷಗಳಲ್ಲಿ 25 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಈ ಹಣ ಎಲ್ಲಿ ಹೋಗಿದೆ ಎಂದು ಅರ್ಥವಾಗುತ್ತಿಲ್ಲ. ನಿಜವಾದ ಅಭಿವೃದ್ಧಿಯಾಗದೇ ಸರ್ಕಾರದ ಜಾಹೀರಾತಿನಲ್ಲಿಯೇ ಅಭಿವೃದ್ಧಿಯಾಗುತ್ತಿದೆ ಎಂದು ಕಿಡಿಕಾರಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ತಲಾದಾಯ ಹೆಚ್ಚಿಸಬೇಕು. ಡಿಎಂಎಫ್, ಕೆ ಎಂ ಇ ಆರ್ ಸಿ ಮತ್ತು ಕೆ ಕೆ ಆರ್ ಡಿ ಬಿ ಅನುದಾನಗಳು ಸರಿಯಾಗಿ ಬಳಕೆಯಾಗಬೇಕು. ಉದ್ಯೋಗ ಹೆಚ್ಚಿಸಬೇಕು. ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಸರ್ಕಾರಿ ಹುದ್ದೆಗಳು ಭರ್ತಿ ಮಾಡಬೇಕು. ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುವ ಅನ್ಯಾಯ ತಡೆಯಲು ವಿಶೇಷ ನ್ಯಾಯಮಂಡಳಿ ರಚಿಸಬೇಕು. ಜನಸಂಖ್ಯೆ ಆಧಾರದ ಮೇಲೆ ಸರ್ಕಾರಿ ಆಸ್ಪತ್ರೆಗಳು ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ವೆಲ್ಫೇರ್ ಪಕ್ಷವು ಚುನಾವಣಾ ಕಣಕ್ಕೆ ಇಳಿಯುವುದೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸೇರಿದಂತೆ ಎಲ್ಲ ಚುನಾವಣೆಯಲ್ಲಿ ನಮ್ಮ ಪಕ್ಷವು ಭಾಗವಹಿಸಿ ಸ್ಪರ್ಧೆ ಮಾಡುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀಕಾಂತ್ ಸಾಲಿಯಾನ್, ಮುಜಾಹಿದ್ ಪಾಷಾ, ಅಬ್ದುಲ್ ಸಲಾಂ, ಮುಬಶೀರ್ ಶಿಂದೆ, ಆಶೀಷ್ ಹಾಗೂ ಇರ್ಫಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News