ವೀರಶೈವ ಲಿಂಗಾಯತ ಎನ್ನುವುದು ಅವೈಜ್ಞಾನಿಕವಾಗಿದ್ದು, ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಸಿ: ಬಸವರಾಜ್ ಧನ್ನೂರ್
ಬೀದರ್: ಸೆ. 22 ರಿಂದ ಪ್ರಾರಂಭವಾಗುವ ಸಾಮಾಜಿಕ, ಶೈಕ್ಷಣಿಕ ಜಾತಿವಾರು ಸಮೀಕ್ಷೆಯ ಇತರೆ ಎನ್ನುವ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ, ಜಾತಿ ಕಾಲಂ ತಮ್ಮ ತಮ್ಮ ಒಳಪಂಗಡಗಳ ಹೆಸರು ಬರೆಯಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ್ ಧನ್ನೂರ್ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಕೆಲವೊಬ್ಬರು ವೀರಶೈವ ಲಿಂಗಾಯತ ಎಂದು ಬರೆಸಿ ಎಂದು ಹೇಳಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ವಿಶೇಷವಾಗಿ ಅಖಿಲ ಭಾರತೀಯ ವೀರಶೈವ ಮಹಾಸಭಾ ಪತ್ರಿಕಾಗೋಷ್ಠಿ ನಡೆಸಿ ಹೇಳಿದೆ. ಹಾಗಾಗಿ ಆ ವೀರಶೈವ ಲಿಂಗಾಯತ ಎನ್ನುವ ಆ ಪದ ಅವೈಜ್ಞಾನಿಕವಾಗಿದ್ದು, ಇಡೀ ವಚನ ಸಾಹಿತ್ಯದಲ್ಲಿ ಎಲ್ಲಿಯೂ ಅದರ ಉಲ್ಲೇಖವಿಲ್ಲ. ಇತಿಹಾಸದಲ್ಲಿ ಅದು ಎಲ್ಲಿಯೂ ಸಿಗುವುದಿಲ್ಲ. ಅದೊಂದು ಸೃಷ್ಟಿಸಲಾದ ಪದವಾಗಿದೆ ಎಂದರು.
ವೀರಶೈವ ಎನ್ನುವುದು ಲಿಂಗಾಯತ ಧರ್ಮದ 97 ಪಂಗಡಗಳ ಪೈಕಿ ಒಂದಾಗಿದೆ. ಹಾಗಾಗಿ ಅದು ಧರ್ಮದ ಹೆಸರು ಆಗಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಯಾರು ಕೂಡ ಸಮೀಕ್ಷೆಯಲ್ಲಿ ಧರ್ಮದ ಕಾಲಂನ ಇತರೆಯಲ್ಲಿ ಲಿಂಗಾಯತ ಎಂದು ಬರೆಸಬೇಕು. ಒಳಪಂಗಡ ಅಥವಾ ಜಾತಿ ಕಾಲಂನಲ್ಲಿ ವೀರಶೈವ ಬರೆಸಿದರೂ ಅಡ್ಡಿಯಿಲ್ಲ ಎಂದರು.
1871 ರಲ್ಲಿ ಬ್ರಿಟಿಷರು ಮಾಡಿದ ಜನಗಣತಿಯಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿತ್ತು. ಅದರಲ್ಲಿ ಒಳಪಂಗಡಗಳಿದ್ದವು. 2002 ರಿಂದ ಮುಂಚೆ ಎಲ್ಲರ ಶಾಲಾ ದಾಖಲಾತಿಯಲ್ಲಿ ಅಲ್ಲಿ ಕೇವಲ ಲಿಂಗಾಯತ ಎಂದು ಬರೆಸಿದ್ದು ಸಿಗುತ್ತದೆ. ಎಸ್. ನಿಜಲಿಂಗಪ್ಪ, ಬಿ.ಡಿ.ಜತ್ತಿ, ಭೀಮಣ್ಣ ಖಂಡ್ರೆ, ಶಾಮನೂರು ಶಿವಶಂಕರಪ್ಪ ಇವರೆಲ್ಲ ಶಾಲಾ ದಾಖಲಾತಿಯಲ್ಲಿ ಲಿಂಗಾಯತ ಎಂದು ಬರೆದದ್ದು ಸಿಗುತ್ತದೆ. ಹಾಗಾಗಿ ಎಲ್ಲರೂ ಲಿಂಗಾಯತ ಎಂದು ಬರೆಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠದ ಮಹಾಲಿಂಗ್ ಮಹಾಸ್ವಾಮಿ, ಶಿವಾನಂದ್ ಮಹಾಸ್ವಾಮಿ, ಸಿದ್ದರಾಮೇಶ್ವರ್ ಸ್ವಾಮಿ, ಶರಣಪ್ಪ ಮಿಠಾರೆ, ವೀರಭದ್ರಪ್ಪ ಭೂಯ್ಯ, ಬಸವರಾಜ್ ಭತಮುರ್ಗೆ, ಉಷಾ ಮಿರ್ಜೆ ಹಾಗೂ ಸುವರ್ಣಾ ಧನ್ನೂರ್ ಸೇರಿದಂತೆ ಇತರರು ಇದ್ದರು.