×
Ad

ಬೀದರ್‌ | ಸಮೀಕ್ಷೆಯ ಧರ್ಮದ ಇತರೆ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ : ಓಂಪ್ರಕಾಶ್ ರೊಟ್ಟೆ

Update: 2025-09-25 19:09 IST

ಬೀದರ್: ಜಾತಿ ಜನಗಣತಿಯ 11ನೇ ಧರ್ಮದ ಇತರೆ ಕಾಲಂನಲ್ಲಿ ಕೇವಲ ಲಿಂಗಾಯತ ಎಂದೇ ನಮೂದಿಸಬೇಕು. ಜಾತಿ ಕಾಲಂನಲ್ಲಿ ನಿಮ್ಮ ಜಾತಿಯ ಹೆಸರು ಬರೆಯಬೇಕು ಎಂದು ವಿಶ್ವಗುರು ಬಸವ ಧರ್ಮ ಕೇಂದ್ರದ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ ಅವರು ಸ್ಪಷ್ಟಪಡಿಸಿದರು.

ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಮತ್ತು ಸ್ವಾರ್ಥ ಮಠಾಧೀಶರು ಯುವಕರಿಗೆ ಉದ್ಯೋಗ ಕಲ್ಪಿಸುವ ಬದಲು ಧರ್ಮದ ಹೆಸರಿನಲ್ಲಿ ಗಲಾಟೆ ಉಂಟುಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಅನೇಕ ಯುವಕರು ಹಾದಿಬೀದಿಯಲ್ಲಿ ಬಲಿಯಾಗುತ್ತಿದ್ದಾರೆ. ಇದು ದುಃಖಕರ” ಎಂದು ಬೇಸರ ವ್ಯಕ್ತಪಡಿಸಿದರು.

1904ರಲ್ಲಿ ಹಾನಗಲ್ಲ ಶ್ರೀಗಳು ಬಸವತತ್ತ್ವದ ಏಳ್ಗೆಗಾಗಿ ಸ್ಥಾಪಿಸಿದ್ದ ವೀರಶೈವ ಮಹಾಸಭೆಯ ಮೂಲ ಉದ್ದೇಶವನ್ನು ಪಂಚಪೀಠಾಧೀಶರು ಮರೆತಿದ್ದಾರೆ ಎಂದು ಅವರು ಆರೋಪಿಸಿದರು. “ವೀರಶೈವರು ಅಖಂಡ ಲಿಂಗಾಯತ ಧರ್ಮ ಸ್ಥಾಪನೆಗೆ ಸಹಕರಿಸಬೇಕು. ಸಂವಿಧಾನದ 29 ಮತ್ತು 30ನೇ ಕಲಂ ಅಡಿಯಲ್ಲಿ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧಾರ್ಮಿಕ ಮಾನ್ಯತೆ ಸಿಕ್ಕರೆ ಎಲ್ಲ ಒಳಪಂಗಡಗಳಿಗೂ ಉಪಯೋಗವಾಗುತ್ತದೆ. ಆದರೆ ವೀರಶೈವರು ಇದಕ್ಕೆ ವಿರೋಧಿಸುತ್ತಿರುವುದು ಪ್ರಶ್ನಾರ್ಹ” ಎಂದು ಹೇಳಿದರು.

ಲಿಂಗಾಯತ ಯುವಕರನ್ನು ಹಿಂದೂ ಸಂಸ್ಕೃತಿಗೆ ಒಯ್ಯುವ ಪ್ರಯತ್ನದಿಂದ ಮೂಢನಂಬಿಕೆ, ಧರ್ಮಾಂಧತೆ ಹೆಚ್ಚುತ್ತಿದೆ ಎಂದು ಟೀಕಿಸಿದ ಅವರು, “ಕಾವಿ, ಖಾಕಿ, ಖಾದಿಗಳ ರಾಜಕೀಯದಿಂದ ಇಂದಿನ ಯುವಕರ ಬದುಕು ಅಯೋಮಯವಾಗಿದೆ. ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಮುರುಗೇಶ ನಿರಾಣಿ, ಪ್ರತಾಪಸಿಂಹ, ಜಗದೀಶ್ ಶೆಟ್ಟರ್ ಮೊದಲಾದ ನಾಯಕರು ಲಿಂಗಾಯತರನ್ನು ಒಗ್ಗೂಡಿಸಬೇಕು. ವಿಭಜನೆಯ ಹುನ್ನಾರ ಬೇಡ” ಎಂದರು.

2018ರಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸ್ಥಾಪಿಸಿದ್ದ ನಾಗಮೋಹನದಾಸ್ ಸಮಿತಿ, “ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧಾರ್ಮಿಕ ಮಾನ್ಯತೆ ನೀಡಲು ಎಲ್ಲಾ ಅರ್ಹತೆಗಳಿವೆ” ಎಂದು ವರದಿ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರ ಸಣ್ಣ ಕಾರಣ ಹೇಳಿ ವರದಿಯನ್ನು ವಾಪಸ್ ಕಳುಹಿಸಿದೆ. “ಈ ವರದಿಯನ್ನು ಪುನರ್‌ಪರಿಶೀಲಿಸಿ ಮತ್ತೆ ಕೇಂದ್ರಕ್ಕೆ ಕಳುಹಿಸಬೇಕು. ಇದಕ್ಕಾಗಿ ಎಲ್ಲಾ ಪಕ್ಷದ ಲಿಂಗಾಯತ ನಾಯಕರು ಒಗ್ಗಟ್ಟಿನಿಂದ ನಿರ್ಣಯ ಕೈಗೊಳ್ಳಬೇಕು” ಎಂದು ರೊಟ್ಟೆ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News