ಬಿಜೆಪಿ, ಆರೆಸ್ಸೆಸ್‌ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ: ಸಿದ್ದರಾಮಯ್ಯ
PC: screengrab/ x.com/siddaramaiah
ಬೆಂಗಳೂರು, ಮೇ 02: ಬಿಜೆಪಿ ಮತ್ತು ಆರೆಸ್ಸೆಸ್ ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಈ ಬಗ್ಗೆ ಅವರಿಗೆ ಬದ್ಧತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ತೂಬಿನಕೆರೆ ಹೆಲಿಪ್ಯಾಡ್ ನಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ನೂರು ವರ್ಷಗಳ ಇತಿಹಾಸ ನೋಡಿದರೆ ಅವರು ಯಾವಾಗಲೂ ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಲೇ ಬಂದವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಿಲ್ಲರ್ ಆಯೋಗದಿಂದ ಹಿಡಿದು ಇಂದಿನವರೆಗೆ ವಿರೋಧ ಮಾಡುತ್ತಲೇ ಬಂದಿದ್ದಾರೆ. ಆರೆಸ್ಸೆಸ್ 1925 ರಂದು ಪ್ರಾರಂಭವಾಗಿದ್ದು 2025 ಕ್ಕೆ ನೂರು ವರ್ಷಗಳಾಗುತ್ತಿದೆ. ಅವರು ಮೀಸಲಾತಿಯನ್ನು ಎಂದೂ ಒಪ್ಪಿಲ್ಲ ಎಂದರು.
ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಸೂಚನೆ
ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದು, ಪದೇ ಪದೇ ಕೋಮು ಗಲಭೆಗಳಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಕೊಲೆಗೀಡಾದ ವ್ಯಕ್ತಿ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದು, ಈ ಬಗ್ಗೆ ಎಡಿಜಿಪಿ (ಕಾನೂನು ಸುವ್ಯವಸ್ಥೆ) ಯವರೊಂದಿಗೆ ಮಾತನಾಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲು ಸೂಚಿಸಿದೆ. ಮನುಷ್ಯನ ಪ್ರಾಣ ಬಹಳ ಮುಖ್ಯ. ಕೂಡಲೇ ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.
ಪೆಹಲ್ಗಾಂ ಗೆ ಪ್ರಧಾನಿ ಮೋದಿ ಏಕೆ ಭೇಟಿ ನೀಡಲಿಲ್ಲ?
ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆಯಾದ ಸ್ಥಳಕ್ಕೆ ಬಿಜೆಪಿಯವರು ಭೇಟಿ ನೀಡಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಬಿಜೆಪಿಯವರು ಯಾವಾಗಲೂ ರಾಜಕೀಯವಾಗಿ ಇಂಥ ಪ್ರಕ್ರಣಗಳನ್ನೇ ಹುಡುಕುತ್ತಾರೆ. ಪೆಹಲ್ಗಾಂ ಪ್ರಕರಣದ ಬಗ್ಗೆ ಇವರು ಏನು ಹೇಳುತ್ತಿದ್ದಾರೆ. ಉಗ್ರರ ದಾಳಿಗೆ 26 ಜನ ಸಾವನ್ನಪ್ಪಿದ್ದರೂ ಪ್ರಧಾನಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆಯೇ? ಬಿಜೆಪಿಯವರಿಗೆ ಪ್ರಧಾನಿ ಮೋದಿಯವರಿಗೆ ಇದು ಮುಖ್ಯ ಅನ್ನಿಸುತ್ತಿಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಪಹಲ್ಗಾಂ ಪ್ರಕರಣ ಭದ್ರತಾ ವೈಫಲ್ಯ ಕಾರಣ
ಪಹಲ್ಗಾಂ ಪ್ರಕರಣ ಭದ್ರತಾ ವೈಫಲ್ಯವಲ್ಲವೇ? ಎಂದು ಪ್ರಶ್ನಿಸಿದ ಸಿಎಂ ಕಾಶ್ಮೀರದಲ್ಲಿ ಒಬ್ಬ ಪೋಲಿಸ್ ಆಗಲಿ, ಭದ್ರತಾ ಪಡೆಯವರಾಗಲಿ ನಿಯೋಜಿಸಿಲ್ಲ. ಯಾರೂ ಇಲ್ಲ ಎಂದರೆ ಏನು ಅರ್ಥ? ನೂರಾರು ಪ್ರವಾಸಿಗರು ಭೇಟಿ ನೀಡುವ ಸ್ಥಳದಲ್ಲಿ ಪೊಲೀಸರು ಇರಬೇಕು ಎಂದರು.
ನನಗೂ ಬೆದರಿಕೆ ಕರೆ ಬಂದಿದೆ
ವಿಧಾನಸಭಾಧ್ಯಕ್ಷ ಯು.ಟಿ .ಖಾದರ್ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ನನಗೂ ಬೆದರಿಕೆ ಕರೆಗಳು ಬರುತ್ತವೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿ, ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು
ರಾಹುಲ್ ಗಾಂಧಿಯವರು ಎರಡು ವರ್ಷಗಳಿಂದ ಈ ಬಗ್ಗೆ ಬಹಳ ಗಂಭೀರವಾಗಿ ಒತ್ತಾಯ ಮಾಡುತ್ತಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಸೇರಿಸಲು ಅವರೇ ಕಾರಣಕರ್ತರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರಿಗೆ ಪತ್ರವನ್ನೂ ಬರೆದಿದ್ದರು. ಈ ಎಲ್ಲರ ಹೋರಾಟ ಮತ್ತು ಒತ್ತಡದ ನಂತರ ಜಾತಿಗಣತಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಯಾವಾಗ ಎಂದು ಸಮಯ ನಿಗದಿ ಮಾಡಿಲ್ಲ. ಜನಗಣತಿಯಲ್ಲಿಯೇ ಜಾತಿ ಗಣತಿಯನ್ನು ಮಾಡುವುದಾಗಿ ಹೇಳಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿಯ ಗರಿಷ್ಠ ಪರಿಮಿತಿಯನ್ನು ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದರು.
ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಶೇ.50% ಗಿಂತ ಹೆಚ್ಚಬಾರದು ಎಂದು ಹೇಳಿದೆ. ಮೀಸಲಾತಿ 50% ಆದರೆ, ಜನಸಂಖ್ಯೆಯ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದರು.
ಹಿಂದುಳಿದವರಿಗೆ ಮೀಸಲಾತಿ ಅತ್ಯಂತ ಅನಿವಾರ್ಯ ಮತ್ತು ಅಗತ್ಯ
ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕಾಗಿರುವುದು ಅತ್ಯಂತ ಅನಿವಾರ್ಯ ಮತ್ತು ಅಗತ್ಯ. ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು. ಆಗ ಮಾತ್ರ ಜಾತಿಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.
ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ತರಲು ಆಗ್ರಹ
ಮೀಸಲಾತಿಯಲ್ಲಿ ಶೇ.50 ರಷ್ಟು ಗರಿಷ್ಠ ಪರಿಮಿತಿಯನ್ನು ತೆಗೆಯಬೇಕು, ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ತರಬೇಕೆಂದು ಪ್ರಧಾನಿಗಳನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ನ್ಯಾ.ರೋಹಿಣಿ ಸಮಿತಿಯ ಶಿಫಾರಸುಗಳನ್ನೂ ಜಾರಿಗೊಳಿಸಬೇಕು
ಸಮೀಕ್ಷೆಯ ಸಮಯವನ್ನು ನಿಗದಿ ಮಾಡಬೇಕು. ನ್ಯಾಯಮೂರ್ತಿ ರೋಹಿಣಿ ಸಮಿತಿಯ ಶಿಫಾರಸುಗಳನ್ನೂ ಜಾರಿಗೊಳಿಸುವ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೂ ಕೈಗೊಳ್ಳಬೇಕು ಎಂದರು.