Chitradurga | ಡಿವೈಡರ್ ದಾಟಿ ಲಾರಿ ಢಿಕ್ಕಿ; ಅಪಘಾತದ ತೀವ್ರತೆಗೆ ಹೊತ್ತಿ ಉರಿದ ಖಾಸಗಿ ಬಸ್: 6 ಮಂದಿ ಸಜೀವ ದಹನ
► ಹಲವರಿಗೆ ಗಾಯ
ಚಿತ್ರದುರ್ಗ : ಕಂಟೇನರ್ ಲಾರಿ ಮತ್ತು ಸೀಬರ್ಡ್ ಸ್ಲೀಪರ್ ಕೋಚ್ ಬಸ್ಸಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ಆರು ಮಂದಿ ಸಜೀವ ದಹನವಾಗಿರುವ ಘಟನೆ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಸಮೀಪದ ಆನೆಸಿದ್ರಿ ಕ್ರಾಸ್ ಬಳಿ ಬುಧವಾರ ತಡರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಿಂದು, ಆಕೆಯ ಮಗು ಗ್ರೇಯಾ(5), ಮಾನಸ, ನವ್ಯಾ, ರಶ್ಮಿ ಮಹಲೆ ಹಾಗೂ ಕಂಟೇನರ್ ಲಾರಿ ಚಾಲಕ ಕುಲದೀಪ್ ಅಪಘಾತದಿಂದ ಮೃತಪಟ್ಟವರು. ಅಲ್ಲದೆ, ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಲಾರಿಯೊಂದು ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ ಹೊತ್ತಿ ಉರಿದಿದ್ದು, ಬಸ್‌ನಲ್ಲಿದ್ದ ಐವರು ಹಾಗೂ ಲಾರಿ ಚಾಲಕ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಾರಿ ಹಿರಿಯೂರಿನಿಂದ ಬೆಂಗಳೂರಿನತ್ತ ಸಾಗುತ್ತಿದ್ದರೆ, ಬಸ್ ಬೆಂಗಳೂರಿನಿಂದ ಗೋಕರ್ಣದತ್ತ ಪ್ರಯಾಣಿಸುತ್ತಿತ್ತು. ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.
ಬಸ್‌ನಲ್ಲಿ ಸುಮಾರು 33 ಜನ ಪ್ರಯಾಣಿಸುತ್ತಿದ್ದರು. ಬಸ್ ಚಾಲಕ, ನಿರ್ವಾಹಕ ಸೇರಿದಂತೆ ಕೆಲವರು ಸಮಯಪ್ರಜ್ಞೆಯಿಂದ ಬಸ್‌ನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 30 ಕಿ.ಮೀ.ವರೆಗೆ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಘಟನಾ ಸ್ಥಳಕ್ಕೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹಿರಿಯೂರು ತಾಲೂಕು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.