×
Ad

ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ ಅಪಘಾತ ವಿಮೆ: ಈಶ್ವರ ಖಂಡ್ರೆ

"ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ 20ಲಕ್ಷ ವಿಮೆ"

Update: 2025-12-25 11:45 IST

ಬೆಂಗಳೂರು, ಡಿ.25: ಅರಣ್ಯ ಇಲಾಖೆಯ ಖಾಯಂ ಅಧಿಕಾರಿ, ಸಿಬ್ಬಂದಿಗೆ 1 ಕೋಟಿ ರೂ. ಅಪಘಾತ (ಮರಣ)ವಿಮೆ ಹಾಗೂ ಹೊರಗುತ್ತಿಗೆ ಸಿಬ್ಬಂದಿಗೆ 20 ಲಕ್ಷ ವಿಮಾ ಸೌಲಭ್ಯ ಕಲ್ಪಿಸಲು ಬ್ಯಾಂಕ್ ಆಫ್ ಬರೋಡಾದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವನ ಮತ್ತು ವನ್ಯಜೀವಿಗಳ ರಕ್ಷಣೆಗಾಗಿ ಮುಂಚೂಣಿ ಸಿಬ್ಬಂದಿಗಳು/ ಹಸಿರು ಸೈನಿಕರು ಅಪಾಯ ಎದಿಸುತ್ತಾ ಹಗಲಿರುಳು ಶ್ರಮಿಸುತ್ತಿದ್ದು, ಇಲಾಖೆ ಕೆಲವು ಶೌರ್ಯಶಾಲಿ ಹಸಿರು ಯೋಧರನ್ನು ಕಳೆದುಕೊಂಡಿದೆ. ಇವರೆಲ್ಲರಿಗೂ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಲು ಈ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ವನ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಮುಂಚೂಣಿ ಹೊರಗುತ್ತಿಗೆ ಸಿಬ್ಬಂದಿಯ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಹೊರಗುತ್ತಿಗೆ ಸಿಬ್ಬಂದಿಗೂ 20 ಲಕ್ಷಗಳ ರೂ. ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಅರಣ್ಯ ಇಲಾಖೆಯ ಎಲ್ಲಾ ಖಾಯಂ ಉದ್ಯೋಗಿಗಳಿಗೆ, ಅವರ ವೇತನ ಮತ್ತು ಶ್ರೇಣಿಯ ಹೊರತಾಗಿ ಎಲ್ಲರಿಗೂ 1 ಕೋಟಿ ರೂ.ಗಳ ಅಪಘಾತ ಮರಣ ವಿಮೆಯನ್ನು ಬ್ಯಾಂಕ್ ನೀಡುತ್ತದೆ, ಒಂದೊಮ್ಮೆ ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಹೆಚ್ಚುವರಿಯಾಗಿ 25ಲಕ್ಷ ರೂ.ಗಳನ್ನು ಬ್ಯಾಂಕ್ ಪಾವತಿಸಲಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡಾದಲ್ಲಿ ಇಲಾಖೆಯ ನೌಕರರು ಪಿಂಚಣಿ ಖಾತೆಯನ್ನು ಮುಂದುವರಿಸಿದರೆ, ಈ ವೈಯಕ್ತಿಕ ಅಪಘಾತ ವಿಮಾ ರಕ್ಷಣೆಯ ಸೌಲಭ್ಯ 70 ವರ್ಷ ವಯಸ್ಸಿನವರೆಗೆ ಮುಂದುವರಿಯುತ್ತದೆ. ಇದಲ್ಲದೆ, ಖಾಯಂ ಉದ್ಯೋಗಿಗಳಿಗೆ ರೂ.10 ಲಕ್ಷಗಳ ಜೀವ ವಿಮಾ ರಕ್ಷಣೆಯನ್ನು ಸಹ ಬ್ಯಾಂಕ್ ಒದಗಿಸುತ್ತದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆಯ ನೌಕರರು ಮತ್ತು ಅವರ ಕುಟುಂಬಗಳ ಹಿತದೃಷ್ಟಿಯಿಂದ ಕರ್ನಾಟಕ ಅರಣ್ಯ ಇಲಾಖೆಯು ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದ್ದು, ಹಲವು ವಿಶೇಷ ಸವಲತ್ತುಗಳೂ ಲಭಿಸಲಿವೆ. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸುವಂತೆ ಮತ್ತು ಬಿಓಬಿಯಲ್ಲಿ ಸಂಬಳ ಖಾತೆ ತೆರೆಯಲು ಸೂಚಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News