×
Ad

ಚಾಮರಾಜನಗರ | ಶಿಥಿಲಾವಸ್ಥೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆ | ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರು

Update: 2025-08-13 00:07 IST

 ಚಾಮರಾಜನಗರ, ಆ.12: ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿನ ಕೊಠಡಿಗಳು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಶಾಲಾ ಕೊಠಡಿಗಳು ದುರಸ್ತಿಯಾಗುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟುಹಿಡಿದು ಶಾಲೆಗೆ ಕಳುಹಿಸದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೆದ್ದನ ಪಾಳ್ಯ ಗ್ರಾಮದಿಂದ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೂಡ್ಲೂರು ಕ್ಲಸ್ಟರ್ ವ್ಯಾಪ್ತಿಯ ಪೆದ್ದನ ಪಾಳ್ಯ ಗ್ರಾಮದ ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿಯವರೆಗೆ 62 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮದ ಸರಕಾರಿ ಶಾಲೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅವಾಂತರಗಳಿಂದ ಪೋಷಕರು ಬೇಸತ್ತು ಹಲವಾರು ಬಾರಿ ಪ್ರತಿಭಟನೆ ನಡೆಸಿ ರಾಜಿ ಸಂಧಾನವು ಸಹ ಆಗಿದೆ. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಶಾಲಾ ಕೊಠಡಿಗಳು ಶಿಥಿಲವಾಗಿರುವುದರಿಂದ ಮಳೆಯ ನೀರು ಸೋರುತ್ತಿದ್ದು ಕಾಂಕ್ರಿಟ್ ಚೂರುಗಳು ಕೆಳಗೆ ಬೀಳುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿರುವುದರಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಪಾಠ ಕೇಳುವಂತಾಗಿದೆ.

ಶಾಲಾ ಕೊಠಡಿಗಳು ಶಿಥಿಲವಾಗಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿದೆ ಪ್ರತಿಭಟನೆ ಮಾಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಹನೂರು ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಹಾಗೂ ಇತರ ಅಧಿಕಾರಿಗಳು ಗ್ರಾಮದ ಶಾಲೆಗೆ ಭೇಟಿ ನೀಡಿ ಪೋಷಕರ ಜೊತೆ ಚರ್ಚೆ ನಡೆಸಿ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ.

ಆದರೆ ಪೋಷಕರು ಹಲವಾರು ವರ್ಷಗಳಿಂದ ಗ್ರಾಮದ ಶಾಲೆಯಲ್ಲಿನ ಸಮಸ್ಯೆಯ ಬಗ್ಗೆ ಗಮನಕ್ಕೆ ತರಲಾಗಿದೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಇದೀಗ ನೀವು ಬಂದು ಭರವಸೆ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ನಿಮ್ಮ ಮಾತಿಗೆ ಬೆಲೆ ಕೊಟ್ಟು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ನಮ್ಮ ಮಕ್ಕಳಿಗೆ ಏನೇ ತೊಂದರೆ ಆದರೂ ನಾವು ಜವಾಬ್ದಾರಿಯಾಗುತ್ತೇವೆ ಎಂದು ಲಿಖಿತವಾಗಿ ಬರೆದು ಕೊಡಿ ಎಂದು ಪಟ್ಟು ಹಿಡಿದರು. ಆದರೆ ಅಧಿಕಾರಿಗಳು ಇದಕೊಪ್ಪದೆ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ತೆರಳಿದ್ದಾರೆ.

ಈ ವೇಳೆ ಎಸ್. ಡಿ. ಎಂ.ಸಿ ಅಧ್ಯಕ್ಷ ಪರಮೇಶ್, ಶಿಕ್ಷಣ ಇಲಾಖೆಯ ಇಸಿಒ ರವೀಂದ್ರ, ಸಿಆರ್ ಪಿ ಷಣ್ಮುಗ ಶಾಲೆಯ ಸಹ ಶಿಕ್ಷಕರುಗಳು ಗ್ರಾಮಸ್ಥರಾದ ಮುರುಳಿ ಈರಣ್ಣ ಸತೀಶ್ ಹಾಜರಿದ್ದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News