ಚಾಮರಾಜನಗರ: ಹುಲಿ ದಾಳಿಗೆ ಎರಡು ಹಸುಗಳು ಬಲಿ
ಅರಣ್ಯ ಅಧಿಕಾರಿಗಳಿಂದ ಡ್ರೋನ್ ಹುಡುಕಾಟ ಆರಂಭ
Update: 2025-11-11 20:17 IST
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಮಂಚಳ್ಳಿ ಗ್ರಾಮದಲ್ಲಿ ಹುಲಿ ದಾಳಿಯಿಂದ ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಆತಂಕ ಉಂಟುಮಾಡಿದ್ದು ಈ ಘಟನೆಯ ಬೆನ್ನಲ್ಲೇ ಅರಣ್ಯ ಇಲಾಖೆ ಹುಲಿಯನ್ನು ಪತ್ತೆಹಚ್ಚುವ ಕಾರ್ಯವನ್ನು ಡ್ರೋನ್ ಕ್ಯಾಮೆರಾ ಸಹಾಯದಿಂದ ಆರಂಭಿಸಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಚಳ್ಳಿ ಗ್ರಾಮದ ಹೊರವಲಯದಲ್ಲಿ ಶಿವಣ್ಣ ಎಂಬವರಿಗೆ ಸೇರಿದ ಎರಡು ಹಸುಗಳು ಮೇಯುತ್ತಿರುವ ವೇಳೆ ಹುಲಿ ಏಕಾಏಕಿ ದಾಳಿ ನಡೆಸಿ ಕೊಂದಿದೆ. ಈ ಘಟನೆ ಬಳಿಕ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ.
ಅರಣ್ಯ ಇಲಾಖೆಯ ಶಶಿಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ನಂತರ ಡ್ರೋನ್ ಕ್ಯಾಮೆರಾ ಮೂಲಕ ಹುಲಿಯ ಚಲನವಲನವನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.