ಚಾಮರಾಜನಗರ: ಗಾಯಗೊಂಡ ಸ್ಥಿತಿಯಲ್ಲಿ ಹುಲಿ ಪತ್ತೆ
Update: 2025-08-15 23:51 IST
ಚಾಮರಾಜನಗರ, ಆ.15: ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಹುಲಿಗಳ ನಡುವೆ ಕಾದಾಟ ನಡೆಸಿದ ಬಳಿಕ ಗಾಯಗೊಂಡ ಸ್ಥಿತಿಯಲ್ಲಿ ಕಾಡಿನ ಬಳಿಯ ಹಳ್ಳದಲ್ಲಿ 11 ವರ್ಷದ ಹುಲಿಯೊಂದು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಕಾಡಿನೊಳಗೆ ಇರುವ ಹಳ್ಳವೊಂದರಲ್ಲಿ ಗಾಯಗೊಂಡಿರುವ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ರಕ್ಷಿಸಿ, ಮೈಸೂರಿನ ಕೂರ್ಗಳ್ಳಿಯಲ್ಲಿರುವ ರಕ್ಷಣಾ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೇಲ್ನೋಟಕ್ಕೆ ಹುಲಿಯ ಬೆನ್ನುಮೂಳೆಗೆ ಗಾಯವಾಗಿರುವಂತೆ ಕಾಣುತ್ತಿದೆ. ನಡೆಯಲು ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿದೆ ಬಂಡೀಪುರ ಸಹಾಯಕ ಅರಣ್ಯಾಧಿಕಾರಿ ಎನ್. ಪಿ ನವೀನ್ ಕುಮಾರ್ ತಿಳಿಸಿದ್ದಾರೆ.