ಚಾಮರಾಜನಗರ | ಶಿಕ್ಷಕಿಯಿಂದ ವಿದ್ಯಾರ್ಥಿಗೆ ಥಳಿತ; ಆರೋಪ
ಚಾಮರಾಜನಗರ, ಸೆ.17: ಜಿಲ್ಲೆಯ ಯಳಂದೂರು ಪಟ್ಟಣದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯನ್ನು ಥಳಿಸಿ ಗಾಯಗೊಳಿಸಿರುವ ಘಟನೆ ನಡೆದಿರುವುದು ವರದಿಯಾಗಿದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ಎಸ್‌ಡಿಎಸ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 5ನೇ ತರಗತಿ ವಿದ್ಯಾರ್ಥಿ ಮೇಲೆ ಭಾನುಮತಿ ಎಂಬ ಶಿಕ್ಷಕಿ ಥಳಿಸಿ ಗಾಯಗೊಳಿಸಿದ್ದಾರೆ.
ಶಾಲೆಯಲ್ಲಿ ಮಧ್ಯ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯು ಪರೀಕ್ಷಾ ಸಮಯದಲ್ಲಿ ಶೌಚಾಲಯಕ್ಕೆ ಹೋಗಬೇಕೆಂದು ಶಿಕ್ಷಕಿಯ ಅನುಮತಿಯನ್ನು ಕೇಳಿದ್ದಾನೆ ಎನ್ನಲಾಗಿದೆ.
ಆದರೆ ಶಿಕ್ಷಕಿ ಶೌಚಕ್ಕೆ ಹೋಗಲು ಅನುಮತಿ ಕೊಟ್ಟಿಲ್ಲ. ಆದರೂ ಕೂಡ ವಿದ್ಯಾರ್ಥಿ ಶೌಚಾಲಯಕ್ಕೆ ತೆರಳಿದ್ದರಿಂದ ಕುಪಿತಗೊಂಡ ಶಿಕ್ಷಕಿ ಈತನ ಮೇಲೆ ಜಾಮಿಟ್ರಿ ಬಾಕ್ಸ್, ಕಡ್ಡಿ ಹಾಗೂ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ವಿದ್ಯಾರ್ಥಿಯ ತಂದೆ ಶಿವಕುಮಾರ್ ಎಂಬವರು ದೂರು ದಾಖಲಿಸಿದ್ದು , ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಯಳಂದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತ್ರಸ್ತ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾರೆ.