ಚಾಮರಾಜನಗರ–ತಮಿಳುನಾಡು ಅಂತರರಾಜ್ಯ ಹೆದ್ದಾರಿಯಲ್ಲಿ ಜೋಡಿ ಚಿರತೆಗಳ ಸಂಚಾರ: ಜನರಲ್ಲಿ ಆತಂಕ
Update: 2026-01-24 09:29 IST
ಚಾಮರಾಜನಗರ: ಕರ್ನಾಟಕ–ತಮಿಳುನಾಡು ಸಂಪರ್ಕಿಸುವ ಚಾಮರಾಜನಗರ ಜಿಲ್ಲೆಯ ಲೊಕ್ಕನಹಳ್ಳಿ–ಒಡೆಯರಪಾಳ್ಯ ನಡುವಿನ ಅಂತರರಾಜ್ಯ ಹೆದ್ದಾರಿಯಲ್ಲಿ ಜೋಡಿ ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕೊಳ್ಳೇಗಾಲ–ಲೊಕ್ಕನಹಳ್ಳಿ ಮಾರ್ಗವಾಗಿ ತಮಿಳುನಾಡಿಗೆ ತೆರಳುವ ಅಂತರರಾಜ್ಯ ಹೆದ್ದಾರಿಯ ಚಿಕ್ಕರಂಗಶೆಟ್ಟಿ ದೊಡ್ಡಿ ಸಮೀಪ ರಸ್ತೆ ಬದಿಯಲ್ಲಿ ಶುಕ್ರವಾರ ರಾತ್ರಿ ಸುಮಾರು 9.30ರ ವೇಳೆಗೆ ಜೋಡಿ ಚಿರತೆಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಪ್ರದೇಶವು ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಚಿರತೆಗಳ ಸಂಚಾರ ಹೆಚ್ಚಾಗಿದೆ. ವಿಶೇಷವಾಗಿ ಬೇಟೆಗಾಗಿ ರಸ್ತೆ ಬದಿಯಲ್ಲಿ ಹೊಂಚು ಹಾಕುತ್ತಿರುವ ಚಿರತೆಗಳಿಂದ ಸುತ್ತಮುತ್ತಲಿನ ಗ್ರಾಮಸ್ಥರು ಜೀವಭಯದಲ್ಲಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ವಾತಾವರಣ ನಿರ್ಮಾಣವಾಗಿದೆ.