ಚಾಮರಾಜನಗರ: ಪಾದಯಾತ್ರಿಯ ಸಾವಿಗೆ ಕಾರಣವಾದ ಚಿರತೆ ಸೆರೆ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಭಕ್ತನ ಸಾವಿಗೆ ಕಾರಣವಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಗುರುವಾರ ರಾತ್ರಿ ಯಶಸ್ವಿಯಾಗಿ ಸೆರೆಹಿಡಿದಿದೆ.
ಮಂಡ್ಯ ಜಿಲ್ಲೆಯ ಪ್ರವೀಣ್ ಎಂಬ ಯುವಕ ಕಾಲ್ನಡಿಗೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಚಿರತೆ ದಾಳಿಗೆ ಬಲಿಯಾಗಿದ್ದನು. ಈ ಘಟನೆ ಬಳಿಕ ಚಿರತೆ ಸೆರೆಗೆ ಸಾರ್ವಜನಿಕರಿಂದ ತೀವ್ರ ಒತ್ತಡ ಕೇಳಿಬಂದಿತ್ತು.
ಬುಧವಾರ ರಾತ್ರಿ ಮಲೆ ಮಹದೇಶ್ವರ ರಸ್ತೆ ವ್ಯಾಪ್ತಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಿತು. ಡ್ರೋನ್‌ಗಳ ಮೂಲಕ ನಿಗಾವಹಿಸಿ, ಅರಿವಳಿಕೆ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು. ಕಾರ್ಯಾಚರಣೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಸೆರೆ ಸಿಕ್ಕಿರುವುದು ಸುಮಾರು 2–3 ವರ್ಷದ ಗಂಡು ಚಿರತೆಯಾಗಿದ್ದು, ಅದನ್ನು ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.