ಚಾಮರಾಜನಗರ | ಮದ್ಯದಂಗಡಿ ವಿರುದ್ಧ ದಂಗೆ ಎದ್ದ ಗ್ರಾಮಸ್ಥರು
ಅಧಿಕಾರಿಗಳ ಮೌನ: ಆರೋಪ
ಚಾಮರಾಜನಗರ: ಗ್ರಾಮದ ಪರಿಮಿತಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಮದ್ಯದಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ.
ಹನೂರು ತಾಲ್ಲೂಕಿನ ರಾಮಾಪುರ ಹೋಬಳಿಯ ಮಾರ್ಟಳ್ಳಿ ಗ್ರಾಮದಲ್ಲಿರುವ ಮದ್ಯದಂಗಡಿಯಿಂದ ಗ್ರಾಮದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಯುವಕರು ಹಾಗೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳೂ ಸಹ ಕುಡಿತದ ಚಟಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಅವರು ವಿದ್ಯಾಭ್ಯಾಸದಿಂದ ದೂರವಾಗುತ್ತಿದ್ದಾರೆ. ಆದರೆ ಅಬಕಾರಿ ಅಧಿಕಾರಿಗಳು ಈ ಕುರಿತು ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ ಮದ್ಯದಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಅಬಕಾರಿ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಮನವಿ ಹಾಗೂ ಪ್ರತಿಭಟನೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಕಳೆದ ನಾಲ್ಕು ದಿನಗಳಿಂದ ಮಾರ್ಟಳ್ಳಿಯಲ್ಲಿ ‘ಮದ್ಯದಂಗಡಿ ಬೇಡ’ ಎಂದು ನಿತ್ಯ ಪ್ರತಿಭಟನೆ ನಡೆಸುತ್ತಿದ್ದಾರೆ. ತಹಸೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಮದ್ಯದಂಗಡಿ ಮುಂದುವರಿಯುತ್ತಲೇ ಇದೆ ಎಂದು ಆರೋಪಿಸಲಾಗಿದೆ. ಇದರಿಂದ ರೋಸಿಹೋಗಿರುವ ಗ್ರಾಮಸ್ಥರು, ಮದ್ಯದಂಗಡಿ ಎತ್ತಂಗಡಿಯಾಗುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.