ಬಂಡೀಪುರ: ಹೋಂ ಸ್ಟೇಯಲ್ಲಿ ಜಿಂಕೆ ತಲೆಬುರುಡೆ, ಚರ್ಮ, ಕೊಂಬು ಪತ್ತೆ
Update: 2026-08-19 15:54 IST
ಚಾಮರಾಜನಗರ : ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯದ ವ್ಯಾಪ್ತಿಯ ಕರ್ನಲ್ ಚೇಕಬ್ ಎಂಬವರ ಹೋಂಸ್ಟೇ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಜಿಂಕೆ ಚರ್ಮ, ಜಿಂಕೆ ಕೊಂಬುಗಳು ಸೇರಿದಂತೆ ವನ್ಯಜೀವಿ ಅವಶೇಷಗಳು ಪತ್ತೆಯಾಗಿವೆ. ಈ ವೇಳೆ ಐದು ಬಂದೂಕುಗಳನ್ನು ಜಪ್ತಿ ಮಾಡಲಾಗಿದೆ.
ಅರಣ್ಯದಂಚಿನ ಆಯಕಟ್ಟಿನ ಪ್ರದೇಶದಲ್ಲಿ ಖಚಿತ ಮಾಹಿತಿ ಮೇರೆಗೆ ರೆಸಾರ್ಟ್ ಮೇಲೆ ದಾಳಿ ನಡೆಸಿದ ವೇಳೆ ಜಿಂಕ ಚರ್ಮ ಹಾಗೂ ಜಿಂಕೆ ಕೊಂಬುಗಳು ಪತ್ತೆಯಾಗಿದ್ದು, ಐದು ಬಂದೂಕುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹಿಮವದ್ ಗೋಪಾಲಸ್ವಾಮಿ ಬೆಟ್ಟ ವಲಯ ಅರಣಯಾಧಿಕಾರಿ ಸತೀಶ್ ಕೆ.ಪಿ. ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.