ಹನೂರು ಶೂಟೌಟ್ ಪ್ರಕರಣ | ಮೃತರ ಕುಟುಂಬಕ್ಕೆ ತಲಾ 15 ಲಕ್ಷ ರೂ. ಪರಿಹಾರ: ಶಾಸಕ ಮಂಜುನಾಥ್

Update: 2026-08-16 18:33 IST

ಹನೂರು ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ

ಚಾಮರಾಜನಗರ / ಹನೂರು : ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಗ್ರಾಮದ ಸಮೀಪದ ಮರಿಮಂಗಲ ಬೀಟ್‌ನಲ್ಲಿ ಶನಿವಾರ ಮುಂಜಾನೆ ಅರಣ್ಯ ಸಿಬ್ಬಂದಿ ಹಾಗೂ ಕಳ್ಳಬೇಟೆ ಆರೋಪಿಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ತೊಮಿಯರ್ ಪಾಳ್ಯದ ಮೂವರು ಮೃತಪಟ್ಟಿರುವ ಘಟನೆ ಬೆನ್ನಲ್ಲೇ ಆರಂಭವಾದ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.

ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹನೂರು ಪೊಲೀಸ್ ಠಾಣೆ ಎದುರು ನಡೆಸುತ್ತಿರುವ ಪ್ರತಿಭಟನೆ ರಾತ್ರಿಯಿಡೀ ಮುಂದುವರಿದಿದ್ದು, ಧರಣಿ ನಿರತರು ರಸ್ತೆಯಲ್ಲೇ ಕುಳಿತು ಬೆಳಗಿನವರೆಗೂ ಪ್ರತಿಭಟನೆ ನಡೆಸಿದರು.

ಬೆಳಗ್ಗೆ ಧರಣಿ ಸ್ಥಳಕ್ಕೆ ನೂರಾರು ಮಂದಿಗೆ ತಿಂಡಿ-ತಿನಿಸುಗಳನ್ನು ತರಲಾಗಿದ್ದು, ಮೃತರ ಕುಟುಂಬಸ್ಥರು ಸೇರಿದಂತೆ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ತಿಂಡಿ ಸೇವಿಸಿದರು. ಇದರಿಂದ ಪ್ರತಿಭಟನಾ ಸ್ಥಳದಲ್ಲಿ ಜನಸಂದಣಿ ಮತ್ತಷ್ಟು ಹೆಚ್ಚಾಯಿತು.

ಇದೇ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಖಾಕಿ ಪಡೆ ನಿಯೋಜನೆ ಮುಂದುವರಿದಿದ್ದು, ಅರಣ್ಯ ಇಲಾಖೆ ಕಚೇರಿ ಸುತ್ತಲೂ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಮೃತರ ಕುಟುಂಬಗಳಿಗೆ ನ್ಯಾಯ, ಸೂಕ್ತ ಪರಿಹಾರ ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳೊಂದಿಗೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು ಬಳಿಕ ಮದ್ಯಾಹ್ನದ ವೇಳೆ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ

ಹನೂರು: ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡೇಟಿನಿಂದ ಮೂವರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು ಹಾಗೂ ಕಾಡಂಚಿನ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ರವಿವಾರವೂ ಮುಂದುವರಿಯಿತು. ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರನ್ನು ಮನವೊಲಿಸಲು ಶಾಸಕ ಮಂಜುನಾಥ್ ಅವರು ಎರಡನೇ ದಿನವೂ ಸ್ಥಳಕ್ಕೆ ಭೇಟಿ ನೀಡಿದರು.

ಮರಿಮಂಗಲ ಸಮೀಪದ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಇದನ್ನು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿರುವ ಮೃತರ ಕುಟುಂಬಸ್ಥರು, ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕರಣದಲ್ಲಿ ತಪ್ಪಿತಸ್ಥರೆಂದು ತನಿಖೆಯಲ್ಲಿ ಕಂಡುಬರುವ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ನ್ಯಾಯಯುತ ಪರಿಹಾರ ನೀಡುವುದರ ಜತೆಗೆ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು. ಅಲ್ಲಿಯವರೆಗೆ ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ಇದರಿಂದಾಗಿ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆಯ ಕಾವು ಮುಂದುವರಿದಿದ್ದು, ಮೃತರ ಕುಟುಂಬಸ್ಥರೊಂದಿಗೆ ಸುತ್ತಮುತ್ತಲಿನ ಕಾಡಂಚಿನ ಗ್ರಾಮಗಳ ಗ್ರಾಮಸ್ಥರೂ ಧರಣಿಗೆ ಬೆಂಬಲ ನೀಡಿದ್ದಾರೆ.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಮಂಜುನಾಥ್, ಪ್ರಕರಣದ ತನಿಖೆಯನ್ನು ಮ್ಯಾಜಿಸ್ಟ್ರೇಟ್‌ಗೆ ವಹಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು, ಆರ್‌ಎಫ್‌ಒ ಹಂತದ ಸಿಬ್ಬಂದಿ ವಿರುದ್ಧ ಅಮಾನತು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರದ ವತಿಯಿಂದ ತಾತ್ಕಾಲಿಕವಾಗಿ 5 ಲಕ್ಷ ಪರಿಹಾರ ಘೋಷಿಸಲಾಗಿದ್ದು, ತಾವು ವೈಯಕ್ತಿಕವಾಗಿ ರೂ10 ಲಕ್ಷ ಪರಿಹಾರ ನೀಡುವುದಾಗಿ ಶಾಸಕ ಮಂಜುನಾಥ್ ತಿಳಿಸಿದರು. ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.

ಇನ್ನು ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು, ತನಿಖೆಗಾಗಿ ವಿಶೇಷ ತಂಡವನ್ನೂ ರಚಿಸಲಾಗಿದೆ. ತನಿಖಾ ವರದಿ ಸಲ್ಲಿಕೆಯಾದ ಬಳಿಕ ಪ್ರಕರಣದ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News