ಚಾಮರಾಜನಗರ | ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ : ಆರೋಪ

Update: 2024-04-25 12:53 GMT

ಚಾಮರಾಜನಗರ : ಲೋಕಸಭಾ ಚುನಾವಣೆಯಲ್ಲಿ ‘ಬಿಜೆಪಿ ಮತ್ತು ಮೈತ್ರಿಕೂಟವನ್ನು ಸೋಲಿಸಿ’ ಎಂಬ ಅಭಿಯಾನವನ್ನು ಬುಧವಾರ ಚಾಮರಾಜನಗರದಲ್ಲಿ ನಡೆಸುತ್ತಿದ್ದ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ತಡೆದು, ಅಭಿಯಾನಕ್ಕೆ ಅಡ್ಡಿಪಡಿಸಿದ್ದಾರೆ. ಎರಡೂ ಕಡೆಯವರ ನಡುವೆ ನೂಕಾಟ, ತಳ್ಳಾಟ ನಡೆದ ಘಟನೆ ಚಾಮರಾಜನಗರದಲ್ಲಿ ನಡೆದಿರುವುದು ವರದಿಯಾಗಿದೆ.

ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮತ್ತು ಉಪಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಹಾಗೂ ಇತರರ ಮೇಲೆ ಬಿಜೆಪಿಯವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ಕೂಡ ನೀಡಲಾಗಿದೆ ಎಂದು ತಿಳಿದು ಬಂದಿದೆ.

ರೈತ ಸಂಘವು ಈ ಚುನಾವಣೆಯಲ್ಲಿ ಬಿಜೆಪಿ, ಮೈತ್ರಿಕೂಟವನ್ನು ಸೋಲಿಸಿ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಚಾಮರಾಜನಗರದಲ್ಲಿ ಅಭಿಯಾನದ ಪರವಾಗಿ ಜನರಿಗೆ ಕರಪತ್ರಗಳನ್ನು ಹಂಚುತ್ತಿತ್ತು. ಸಾಹಿತಿ ದೇವನೂರ ಮಹಾದೇವ ಅವರು ಕೂಡ ಅಭಿಯಾನದಲ್ಲಿ ಭಾಗವಹಿಸಿದ್ದರು.

ಭುವನೇಶ್ವರಿ ವೃತ್ತ, ಕೆಎಸ್ಸಾರ್ಟಿಸಿ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರಗಳನ್ನು ಹಂಚಿದ ಬಳಿಕ ಜನನ ಮಂಟಪದ ಬಳಿ ಬರುತ್ತಿದ್ದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರೈತ ಸಂಘದ ಮುಖಂಡರನ್ನು ಅಡ್ಡಗಟ್ಟಿದರು. ‘ಮೋದಿ, ಬಿಜೆಪಿ ಮೈತ್ರಿಕೂಟಕ್ಕೆ ಮತ ಹಾಕಬಾರದು ಎಂದು ಹೇಳಲು ನೀವು ಯಾರು’ ಎಂದು ಪ್ರಶ್ನಿಸಿದರಲ್ಲದೇ ರೈತ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ಮಹೇಶ್ ಪ್ರಭು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮುಖಂಡರಾದ ಶೈಲೇಂದ್ರ ಸೇರಿದಂತೆ ಮುಖಂಡರು ‘ಚುನಾವಣೆಯಲ್ಲಿ ಇಂತಹ ಪಕ್ಷದ ಅಭ್ಯರ್ಥಿಗೆ ಹಾಕುವಂತೆ ಹೇಳುವ ಹಕ್ಕು ನಮಗಿದೆ. ಅದನ್ನು ಪ್ರಶ್ನಿಸಲು ನಿಮಗೆ ಅಧಿಕಾರವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ, ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ, ರೈತ ಸಂಘದ ಮುಖಂಡರು ಜನನ ಮಂಟಪದ ಬಳಿಯಿರುವ ತಮ್ಮ ಕಾರ್ಯಾಲಯದ ಎದುರು ಕುಳಿತರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಆದರೆ, ಸುಮ್ಮನಾಗದ ಬಿಜೆಪಿ ಕಾರ್ಯಕರ್ತರು, ರೈತ ಸಂಘದವರನ್ನು ಹೊರಗೆ ಕಳುಹಿಸಿ ಎಂದು ಪೊಲೀಸರಿಗೆ ತಿಳಿಸಿದರು.

‘ರೈತ ಸಂಘದವರು ಪ್ರಚಾರ ಮಾಡಲು ಅನುಮತಿ ಪಡೆದಿಲ್ಲ. ಮಂಗಳವಾರ ನಮೋ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಪೊಲೀಸರು ಅಡ್ಡಿಪಡಿಸಿದರು. ಹಾಗೆಯೇ ಇವರ ಮೇಲೂ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಪರಿಸ್ಥಿತಿ ತಿಳಿಗೊಂಡ ನಂತರ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ಅವರು, ಮುಖಂಡರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಎಫ್‌ಐಆರ್ ದಾಖಲು: ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಅವರು ನೀಡಿರುವ ದೂರಿನ ಆಧಾರದಲ್ಲಿ ಪಟ್ಟಣ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಿಲ್ಲ. ಬಿಜೆಪಿ ಕಾರ್ಯಕರ್ತರು ಎಂದು ಬರೆದಿದ್ದಾರೆ. ಈ ಬಗ್ಗೆ ‘ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ‘ದೂರಿನಲ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನೂ ದೂರುದಾರರು ಉಲ್ಲೇಖಿಸಿಲ್ಲ. ವೀಡಿಯೊ ತುಣುಕುಗಳನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ. ಎಫ್‌ಐಆರ್ ದಾಖಲಿಸಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಸ್ಪಿಯವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News