×
Ad

ಚಾಮರಾಜನಗರ: ಕಾರಿನ ಮೇಲೆ ಕಬ್ಬಿನ ಲಾರಿ ಪಲ್ಟಿ; ಮೂವರು ಮೃತ್ಯು

Update: 2024-03-12 13:28 IST

ಚಾಮರಾಜನಗರ: ಕಾರಿನ ಮೇಲೆ ಕಬ್ಬಿನ ಲಾರಿ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ದಿಂಬಂ ಘಾಟ್ ನಲ್ಲಿ ಮಂಗಳವಾರ ನಡೆದಿದೆ.

ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಮಾರ್ಗವಾಗಿ ಹಾದು ಹೋಗುವ ಕರ್ನಾಟಕ ತಮಿಳುನಾಡು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ದಿಂಬಂ ಘಾಟ್ ನ 27 ನೇ ತಿರುವಿನಲ್ಲಿ ಕಾರಿನ ಮೇಲೆ ಕಬ್ಬು ತುಂಬಿದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.

ಮೃತರನ್ನು ತಮಿಳುನಾಡಿನ ಈರೋಡ್‌ ಮೂಲದವರೆಂದು ಗುರುತಿಸಲಾಗಿದೆ. ಒಂದೇ ಕುಟುಂಬದ ಐವರು ಕಾರಿನಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುತ್ತಿದ್ದರು. ಈ ವೇಳೆ ಕಬ್ಬು ತುಂಬಿದ ಲಾರಿ ಪಲ್ಟಿಯಾಗಿದ್ದು, ಕಬ್ಬಿನ ಕಟ್ಟುಗಳು ಕಾರಿನ ಮೇಲೆ ಬಿದ್ದಿದೆ ಎನ್ನಲಾಗಿದೆ.

ತಕ್ಷಣವೇ ಇತರ ವಾಹನ ಸವಾರರು ಕಬ್ಬನ್ನು ತೆಗೆದು ಇಬ್ಬರನ್ನು ರಕ್ಷಿಸಿದ್ದು, ಕಾರಿನೊಳಗೆ ಬಹಳ ಹೊತ್ತು ಸಿಲುಕಿಕೊಂಡಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಕಾರು ಕಬ್ಬಿನಡಿ ಸಿಲುಕಿಕೊಂಡ ಕಾರಣ ಮೂವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.

ಅವಘಡದಲ್ಲಿ  ರಕ್ಷಿಸಲ್ಪಟ್ಟ ಇಬ್ಬರನ್ನು ಚಿಕಿತ್ಸೆಗಾಗಿ ಸತ್ಯಮಂಗಲಂ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ   ಬಗ್ಗೆ ಆಸನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News