ಚಾಮರಾಜನಗರ: ಮಗುಚಿ ಬಿದ್ದ ಶಾಲಾ ವಾಹನ ; ಮೂವರು ಮಕ್ಕಳಿಗೆ ಗಾಯ
Update: 2025-06-26 12:10 IST
ಚಾಮರಾಜನಗರ : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಶಾಲಾ ವಾಹನ ಮಗುಚಿ ಬಿದ್ದು ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೆಲಸೂರು ಗ್ರಾಮದ ಬಳಿ ಗುರುವಾರ ನಡೆದಿದೆ.
ಗುಂಡ್ಲುಪೇಟೆ ಪಟ್ಟಣದ ರೇಡಿಯಂಟ್ ಶಾಲೆಯ ಯುಕೆಜಿ ತರಗತಿಯ ಮೂವರು ಮಕ್ಕಳು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಇವರು ಗುಂಡ್ಲುಪೇಟೆ ಯಿಂದ ಕೆಲಸೂರು ಮಾರ್ಗದಲ್ಲಿ ಮಲ್ಲಮ್ಮನಹುಂಡಿ, ಬೆರಟಹಳ್ಳಿ, ಮೂಡಗೂರು ಕಡೆಗೆ ಪ್ರಯಾಣಿಸುತ್ತಿದ್ದರು.
ವಿಷಯ ತಿಳಿದು ಸ್ಥಳೀಯರು ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದರು. ನಂತರ ಶಾಲಾ ಸಿಬ್ಬಂದಿ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಪೋಷಕರು ಸಾರ್ವಜನಿಕರ ಆಸ್ಪತ್ರೆಗೆ ಆಗಮಿಸಿ, ಚಿಕಿತ್ಸೆ ಪಡೆದ ನಂತರ ಮಕ್ಕಳನ್ನು ಜತೆಯಲ್ಲಿ ಕರೆದೊಯ್ದರು. ಈ ಸಂಬಂಧ ಯಾವುದೇ ಕೇಸು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ