ಚಾಮರಾಜನಗರ | ವರದಕ್ಷಿಣೆ ಕಿರುಕುಳ ಆರೋಪ: ಗೃಹಿಣಿ ಅನುಮಾನಾಸ್ಪದ ಸಾವು
ಚಾಮರಾಜನಗರ: ಚಾಮರಾಜನಗರ ಹನೂರು ತಾಲೂಕಿನ ಮಾರ್ಟಳ್ಳಿ ಸಮೀಪದ ಕೋಟೆಪೊದೆ ಗ್ರಾಮದಲ್ಲಿ ಗೃಹಿಣಿಯೋರ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದ್ದು, ಮೃತಳ ತಂದೆ ವರದಕ್ಷಿಣೆ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೃತ ಮಹಿಳೆಯನ್ನು ಪ್ರಿಯಾ (ಶಿವಕುಮಾರ್ ಪತ್ನಿ) ಎಂದು ಗುರುತಿಸಲಾಗಿದೆ.
ಮೃತಳ ತಂದೆ ನೀಡಿದ ದೂರಿನ ಪ್ರಕಾರ, ಪತಿ ಶಿವಕುಮಾರ್ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದಿದ್ದು, ಅದರ ಕಂತುಗಳನ್ನು ತಂದೆಯಿಂದ ತರಿಸಿಕೊಳ್ಳುವಂತೆ ಪ್ರಿಯಾಳಿಗೆ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ. ಈ ಕುರಿತು ಒಂದು ತಿಂಗಳ ಹಿಂದೆ ಬಂಧುಗಳು ಸೇರಿ ಬುದ್ಧಿವಾದ ಹೇಳಿದ್ದರೂ, ವರದಕ್ಷಿಣೆಗಾಗಿ ಒತ್ತಡ ಮುಂದುವರಿದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2025ರ ಡಿಸೆಂಬರ್‌ನಲ್ಲಿ 50,000 ರೂ. ನಗದು ನೀಡಿದ್ದಾಗಿ ಮೃತಳ ತಂದೆ ತಿಳಿಸಿದ್ದಾರೆ.
ಫೆ.14ರ, 2026ರಂದು ಮಧ್ಯಾಹ್ನ ತಮ್ಮ ಮಕ್ಕಳು ಪ್ರಿಯಾಳನ್ನು ಭೇಟಿಯಾದಾಗ ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವ ವಿಷಯ ತಿಳಿಸಿದ್ದಾಳೆ ಎನ್ನಲಾಗಿದೆ. ಸಂಜೆ ತಂದೆಯೊಂದಿಗೆ ದೂರವಾಣಿ ಮೂಲಕವೂ ಇದೇ ವಿಷಯವನ್ನು ಹಂಚಿಕೊಂಡಿದ್ದಾಳೆ ಎಂದು ದೂರಿನಲ್ಲಿ ಹೇಳಲಾಗಿದೆ.
ರಾತ್ರಿ ವೇಳೆ ಶಿವಕುಮಾರ್ ಮನೆ ಹೊರಗೆ ಹೋಗಿದ್ದಾಗ, ಸುಮಾರು 10 ಗಂಟೆ ಸುಮಾರಿಗೆ ಪ್ರಿಯಾ ಮನೆಯ ಕೋಣೆಯ ಫ್ಯಾನಿಗೆ ವೇಲಿನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ. ಬಳಿಕ ಕುಟುಂಬದವರು ಮೃತದೇಹವನ್ನು ಕೆಳಗಿಳಿಸಿದ್ದಾರೆ.
“ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಿವಕುಮಾರ್ ಮತ್ತು ಅವನ ತಾಯಿ ಶಾಂತಿ ಸಾವಿಗೆ ಕಾರಣರು” ಎಂದು ಮೃತಳ ತಂದೆ ಆರೋಪಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಘಟನೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.