×
Ad

ಚಾಮರಾಜನಗರ: ಧಾರ್ಮಿಕ ಹಿನ್ನೆಲೆ ಬಗ್ಗೆ ಗ್ರಾಮಸ್ಥರ ವಿರೋಧ; ಪೀಠ ತೊರೆದ ಲಿಂಗಾಯತ ಸ್ವಾಮೀಜಿ

Update: 2025-08-06 10:25 IST

ಚಾಮರಾಜನಗರ: ಯುವ ಸ್ವಾಮೀಜಿಯೊಬ್ಬರು ತಮ್ಮ ಧರ್ಮದ ಹಿನ್ನೆಲೆಗೆ ಕೆಲವರಿಂದ ವಿರೋಧ ವ್ಯಕ್ತವಾದ ಕಾರಣ ಪೀಠ ತೊರೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಸ್ವಾಮೀಜಿಯಾಗಿದ್ದ ನಿಜಲಿಂಗ ಸ್ವಾಮೀಜಿ ಮಠ ತೊರೆದ ಯುವ ಸನ್ಯಾಸಿ. ಯಾದಗಿರಿ ಜಿಲ್ಲೆಯ ಶಹಾಪುರ ಗ್ರಾಮದ ನಿಜಲಿಂಗ ಸ್ವಾಮೀಜಿ ಅವರು ಇಸ್ಲಾಂ ಧರ್ಮದ ಹಿನ್ನೆಲೆಯವರು ಎಂಬುದು ಬೆಳಕಿಗೆ ಬಂದಿತ್ತು. ಅದಕ್ಕೆ ವಿರೋಧ ವ್ಯಕ್ತವಾಗಿತ್ತು.

ಬಸವತತ್ವಕ್ಕೆ ಮನಸೋತಿದ್ದ ಯಾದಗಿರಿ ಜಿಲ್ಲೆಯ ಶಹಾಪುರದ ಮಹಮ್ಮದ್ ನಿಸಾರ್ (22) ಅವರು ಲಿಂಗ ದೀಕ್ಷೆ ಪಡೆದು ನಿಜಲಿಂಗ ಸ್ವಾಮೀಜಿ ಎಂದು ಹೆಸರು ಬದಲಾಯಿಸಿಕೊಂಡು ಶಾಖಾಮಠದ ಸ್ವಾಮೀಜಿಯಾಗಿದ್ದರು.

ಬಸವ ಕಲ್ಯಾಣದ ಸ್ವಾಮೀಜಿಯೊಬ್ಬರ ಶಿಫಾರಸ್ಸಿನ ಮೇರೆಗೆ ಪೀಠಾಧಿಪತಿಯಾಗಿ ಬಂದಿದ್ದ ಇವರು, ಧಾರ್ಮಿಕ ಕಾರ್ಯಗಳು ಮತ್ತು ಪ್ರವಚನ ನಡೆಸಿಕೊಡುತ್ತಿದ್ದರು.

ಆ.1 ರಂದು ಮಠದ ಭಕ್ತನಾಗಿದ್ದ ಗ್ರಾಮದ ಯುವಕನೊಬ್ಬ ಸ್ವಾಮೀಜಿಯ ಮೊಬೈಲ್ ನಲ್ಲಿ ಅವರ ಆಧಾರ್ ಕಾರ್ಡ್ ಗಮನಿಸಿ ಅವರ ಧಾರ್ಮಿಕ ಹಿನ್ನೆಲೆಯನ್ನು ಗ್ರಾಮಸ್ಥರಿಗೆ ತಿಳಿಸಿದ್ದಾನೆ.

ಈ ಬಗ್ಗೆ ವಿಚಾರಿಸಿದಾಗ, ನಾನು ಇನ್ನೊಂದು ಧರ್ಮದಿಂದ ಬಂದಿದ್ದರೂ ಬಸವ ತತ್ವದಿಂದ ಆಕರ್ಷಿತನಾಗಿ 2021ರಲ್ಲಿ ಲಿಂಗದೀಕ್ಷೆ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಇನ್ನೊಂದು ಧರ್ಮದಿಂದ ಬಂದಿರುವ ಮಾಹಿತಿ ಮುಚ್ಚಿಟ್ಟಿದ್ದ ಕಾರಣಕ್ಕೆ ನೀವು ಪೀಠಾಧಿಪತಿಯಾಗಿ ಇರುವುದು ಬೇಡ ಎಂದು ಕೆಲವು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರ್ ಮತ್ತು ಸಿಬಂದಿ ಗ್ರಾಮಕ್ಕೆ ತೆರಳಿ ಸ್ವಾಮೀಜಿ ಮತ್ತು ಗ್ರಾಮಸ್ಥರ ಅಭಿಪ್ರಾಯ ಪಡೆದರು. ಗ್ರಾಮಸ್ಥರಿಗೆ ಇಷ್ಟವಿಲ್ಲದಿದ್ದರೆ ಪೀಠ ತ್ಯಾಗ ಮಾಡಲು ಸಿದ್ಧನಿರುವುದಾಗಿ ತಿಳಿಸಿದ ನಿಜಲಿಂಗ ಸ್ವಾಮೀಜಿ ಸ್ವಗ್ರಾಮಕ್ಕೆ ತೆರಳಿದ್ದಾರೆ.

ಸ್ವಾಮೀಜಿ ಲಿಂಗದೀಕ್ಷೆ ಪಡೆದ ಬಗ್ಗೆ ಮತ್ತು ಧಾರ್ಮಿಕ ಸಮಾರಂಭವೊಂದರಲ್ಲಿ ಶ್ರೀಗಳೊಂದಿಗೆ ವೇದಿಕೆ ಹಂಚಿಕೊಂಡಿರುವ ಮತ್ತು ಪೂರ್ವಾಶ್ರಮದ ದಾಖಲೆಗಳು ಲಭ್ಯವಾಗಿವೆ.

ಮೂಲತಃ ಚೌಡಹಳ್ಳಿಯ, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಮಹದೇವಪ್ರಸಾದ್ ಎಂಬವರು ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಮೇಲಿನ ಅಭಿಮಾನದಿಂದ ತಮ್ಮದೇ ಜಾಗ ಮತ್ತು ಸ್ವಂತ ಖರ್ಚಿನಲ್ಲಿ ಮಠ ನಿರ್ಮಿಸಿದ್ದರು. ವರ್ಷದ ಹಿಂದೆ ಇದು ಲೋಕಾರ್ಪಣೆಯಾಗಿತ್ತು.

ನಂತರ ಅಕ್ಕಮಹದೇವಿ ಮಾತಾಜಿ ಎಂಬುವರು ಪೀಠಾಧಿಪತಿಯಾಗಿ ಬಂದಿದ್ದರೂ ಕಾರಣಾಂತರದಿಂದ ಪೀಠ ತ್ಯಾಗ ಮಾಡಿ ತೆರಳಿದ್ದರು. ನಂತರ ನಿಜಲಿಂಗಸ್ವಾಮೀಜಿ ಪೀಠಾಧಿಪತಿಯಾಗಿ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News