ನಾಳೆ ಸದನದಲ್ಲಿ ಧರ್ಮಸ್ಥಳ ಪ್ರಕರಣದ ಸಂಪೂರ್ಣ ವರದಿ ಮಂಡನೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ಚಾಮರಾಜನಗರ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ (ಸೋಮವಾರ) ಸದನದಲ್ಲಿ ಸಂಪೂರ್ಣವಾಗಿ ವರದಿ ಮಂಡಿಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಕಳೇಬರ ಶೋಧ ಪ್ರಕರಣ ಕೊನೆಯ ಹಂತಕ್ಕೆ ಬಂದಿದೆ. ಶನಿವಾರ ಕಳೇಬರ ಶೋಧಕ್ಕೆ ನಿಲ್ಲಿಸಿರುವ ಎಸ್ಐಟಿ, ಠಾಣೆಗೆ ದೂರುದಾರನ್ನು ಕರೆಸಿಕೊಂಡು ಕೋರ್ಟ್‌ಗೆ ತಂದಿದ್ದ ತಲೆ ಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು
ಯಾರೂ ಕೂಡ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಈ ಪ್ರಕರಣದಲ್ಲಿ ರಾಜಕಾರಣ ಮಾಡಬಾರದು. ಇದು ನ್ಯಾಯ ಮತ್ತು ಕಾನೂನಿಗೆ ಸಂಬಂಧಪಟ್ಟಂತಹ ವಿಚಾರವಾಗಿದೆ. ಯಾರೇ ದೂರು ಕೊಟ್ಟರೂ ಎಫ್ಐಆರ್ ದಾಖಲಿಸಿ ತನಿಖೆ ಮಾಡುವುದು ಸಹಜ. ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎಸ್ಐಟಿ ತನಿಖೆ ನಡೆಯುತ್ತಿದೆ, ಅದು ಅಂತಿಮವಾಗಲಿ. ಮಧ್ಯಂತರ ವರದಿ ಬಗ್ಗೆ ಎಸ್ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಇದರಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ದೂರುದಾರ ಹೇಳಿದಂತೆ ಕೂರುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.