ಹನೂರು: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗುಂಡಿನ ದಾಳಿ; ಬೇಟೆಗೆ ಬಂದಿದ್ದರೆನ್ನಲಾದ ಮೂವರು ಮೃತ್ಯು

ರೊಚ್ಚಿಗೆದ್ದ ಗ್ರಾಮಸ್ಥರಿಂದ ಅರಣ್ಯಾಧಿಕಾರಿಗಳ ಕಛೇರಿಯ ಮೇಲೆ ದಾಳಿ ನಡೆಸಿ ದ್ವಂಸ

Update: 2026-08-15 11:45 IST

ಚಾಮರಾಜನಗರ / ಹನೂರು : ಅರಣ್ಯದಲ್ಲಿ ಬೇಟೆಗೆ ಬಂದಿದ್ದರೆನ್ನಲಾದ ನಾಲ್ವರ ಮತ್ತು ಅರಣ್ಯ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಶನಿವಾರ ಮುಂಜಾನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಶಾಗ್ಯ ಗ್ರಾಮದ ಸಮೀಪದ ಮರಿಯ ಮಂಗಲ ಬೀಟ್ ನಲ್ಲಿ ಘಟನೆ ನಡೆದಿದ್ದು, ಮೃತರನ್ನು ತೊಮಿಯರ್ ಪಾಳ್ಯ ಗ್ರಾಮದ ಅಂತೊಣಿಸ್ವಾಮಿ , ಪೀಟರ್ , ಕುಮಾರ್ ಎಂದು ಗುರುತಿಸಲಾಗಿದೆ. ಮರಿಯ ಮಂಗಲದ ಮಹಿಮಾದಾಸ್ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದರೆನ್ನಲಾದ ನಾಲ್ವರು ವನ್ಯ ಪ್ರಾಣಿಯನ್ನು ಬೇಟೆ ಮಾಡಿ ಅದರ ಮಾಂಸವನ್ನು ಹಂಚಿಕೆ ಮಾಡಿಕೊಳ್ಳುವ ಸಮಯದಲ್ಲಿ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಗುಂಡಿನ ದಾಳಿ ನಡೆಸಿದಾಗ ಅಂತೊಣಿಸ್ವಾಮಿ , ಪೀಟರ್ , ಕುಮಾರ್ ಸಾವನ್ನಪ್ಪಿದರು. ಪರಾರಿಯಾಗಿರುವ ಮಹಿಮಾದಾಸ್ ಸೆರೆಗಾಗಿ ಅರಣ್ಯಾಧಿಕಾರಿಗಳು ಶೋಧನಾ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಮೃತ ದೇಹಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ನಂತರ ಪೊಲೀಸ್ ಬಂದೂಬಸ್ತ್ ನೊಂದಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳುಹಿಸಲಾಯಿತು.

ರೊಚ್ಚಿಗೆದ್ದ ಗ್ರಾಮಸ್ಥರು :

ಶಾಗ್ಯ ಬಳಿಯ ಮರಿಯ ಮಂಗಲ ಬೀಟ್ನಲ್ಲಿ ತೊಮಿಯರ್ ಪಾಳ್ಯ ಗ್ರಾಮದ ಮೂವರನ್ನು ಅರಣ್ಯ ಸಿಬ್ಬಂದಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದ ಕೆಲವರು ಶಾಗ್ಯದಲ್ಲಿರುವ ಸಹಾಯಕ ವಲಯ ಅರಣ್ಯಾಧಿಕಾರಿಗಳ ಕಛೇರಿಯ ಮೇಲೆ ದಾಳಿ ನಡೆಸಿ ಕಛೇರಿಯಲ್ಲಿದ್ದ ವಸ್ತುಗಳನ್ನು ದ್ವಂಸ ಮಾಡಿದ್ದಾರೆ.

ಪ್ರಸ್ತುತ ತೊಮಿಯರ್ ಪಾಳ್ಯ, ಶಾಗ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News