ಚಿಕ್ಕಬಳ್ಳಾಪುರ : ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿದ ಅನಾಹುತ ಉಂಟಾಗಿದ್ದು, ಜನರ ಆಕ್ಷೇಪದ ನಡುವೆ ಯಾವ ತರಬೇತಿಯನ್ನು ನೀಡದೆ ಬಿಎಲ್‌ಒಗಳನ್ನು ಕಣಕ್ಕೆ ಇಳಿಸಿ ಅವರಿಂದ ಅರ್ಜಿ ಹಂಚಿಸಿ ಸರಿಯಾದ ರೀತಿಯಲ್ಲಿ ಅಪ್ ಲೋಡ್ ಮಾಡದೆ, ರಾಜ್ಯದಲ್ಲಿ ಸುಮಾರು 1 ಕೋಟಿಕ್ಕೂ ಹೆಚ್ಚು ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅಲ್ಲದೆ ಸುಮಾರು 43 ಲಕ್ಷ ಜನರನ್ನು ಅನುಮಾನಾಸ್ಪದ ಮತದಾರರೆಂದು ಗುರುತಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಚಿತ್ರನಟ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಪರಿಷ್ಕರಣೆ ಹೆಸರಿನಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸಿ ಲಕ್ಷಾಂತರ ಮತದಾರರ ಹಕ್ಕನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿನ ತಪ್ಪುಗಳಿಂದ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತದೆ ಹಾಗೂ ಇದರಿಂದ ತಮಗೆ ದೊರೆಯುವ ಸರಕಾರಿ ಸೌಲಭ್ಯಗಳು ಸ್ಥಗಿತಗೊಳ್ಳಬಹುದು ಎಂಬ ಭಯ ಜನರಲ್ಲಿ ಮೂಡಿದೆ. ಆದ್ದರಿಂದ ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಿ, ಈ ಹಿಂದೆ ಇದ್ದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು. ಎಲ್ಲ ಜಿಲ್ಲೆಗಳಲ್ಲಿ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ವತಿಯಿಂದ ವಿಶೇಷ ಪರಿಷ್ಕರಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರವಾಸ ಕೈಗೊಳ್ಳಲಾಗುತ್ತಿದೆ.ಈ ಸಂದರ್ಭದಲ್ಲಿ ಕೆಲವರು ತಾವು ಬದುಕಿದ್ದರೂ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ನಮೂದಿಸಿರುವ ಬಗ್ಗೆ ದೂರು ನೀಡಿದ್ದಾರೆ.ಬದುಕಿರುವವರನ್ನೇ ಮೃತಪಟ್ಟಿದ್ದಾರೆ ಎಂದು ದಾಖಲಿಸುವ ಪ್ರಕ್ರಿಯೆಯ ಉದ್ದೇಶವೇನು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮತಕಾವಲು ಸಮಿತಿ ಜಿಲ್ಲಾಧ್ಯಕ್ಷ ಮುಹಮ್ಮದ್ ನೂರುಲ್ಲಾ, ದಸಂಸ ಸಮಿತಿ ರಾಜ್ಯ ಮುಖಂಡ ಎನ್.ವೆಂಕಟೇಶ್, ಎದ್ದೇಳು ಕರ್ನಾಟಕ ರಾಜ್ಯ ಸದಸ್ಯ ಕುಮಾರ್, ಜಿಲ್ಲಾ ಕೋ ಆರ್ಡಿನೇಟರ್ ಶಾಮಿರ್, ಸಾಮಾಜಿಕ ಕಾರ್ಯಕರ್ತ ಶಶಿರಾಜ್, ಎಸ್‌ಡಿಪಿಐ ಖಲೀಲ್, ಅಝಗರ್, ಜೀವಿಕ ಸಂಘಟನೆ ಕಿರಣ್, ಎದ್ದೇಳು ಕರ್ನಾಟಕ ಸದಸ್ಯ ಅಮ್ಜದ್, ಸಾಮಾಜಿಕ ಹೋರಾಟಗಾರ ಸೈಯದ್ ಬಾಷಾ ಇತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor