ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ಕಾಂಗ್ರೆಸ್ ಮುಖಂಡರಿಂದ ಕೆಪಿಸಿಸಿ ಅಧ್ಯಕ್ಷರಿಗೆ ದೂರು
ಚಿಕ್ಕಮಗಳೂರು : ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಡಿಗೆರೆ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕರು ನಯನಾ ಮೋಟಮ್ಮ ವಿರುದ್ಧ ಕೆಪಿಸಿಸಿ ನಾಯಕರಿಗೆ ಲಿಖಿತ ದೂರು ಸಲ್ಲಿಸಿದ್ದು, ಈ ವಿಚಾರ ಸದ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮತ್ತು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ 45ಕ್ಕೂ ಹೆಚ್ಚು ಹಿರಿಯ ಮುಖಂಡರನ್ನೊಳಗೊಂಡ ನಿಯೋಗವು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಲಿಖಿತ ದೂರನ್ನು ಸಲ್ಲಿಸಿದೆ. 2023ರ ಚುನಾವಣೆಯಲ್ಲಿ ಕೇವಲ 722 ಮತಗಳ ಅತ್ಯಲ್ಪ ಅಂತರದಿಂದ ಗೆಲುವು ಸಾಧಿಸಿರುವ ಶಾಸಕಿಯ ಧೋರಣೆಯಿಂದಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭಾರೀ ಹಿನ್ನೆಡೆಯಾಗುವ ಆತಂಕವನ್ನು ಮುಖಂಡರು ವ್ಯಕ್ತಪಡಿಸಿದ್ದಾರೆ. ಹಾಲಿ ಶಾಸಕಿ ನಯನಾ ಮೋಟಮ್ಮ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ಬೆವರು ಹರಿಸಿದ ಮೂಲ ಕಾಂಗ್ರೆಸ್ಸಿಗರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡುತ್ತಿದ್ದಾರೆಂಬ ಆರೋಪ ಈ ಕಾಂಗ್ರೆಸ್ ಮುಖಂಡರದ್ದಾಗಿದೆ.
ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಒಟ್ಟು 16 ಗಂಭೀರ ಅಂಶಗಳನ್ನೊಳಗೊಂಡ ಸುದೀರ್ಘ ದೂರಿನ ಪಟ್ಟಿಯನ್ನು ಕೆಪಿಸಿಸಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದು, 2023ರ ಚುನಾವಣೆಯ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ಆರೆಸ್ಸೆಸ್ ಮತ್ತು ಭಜರಂಗದಳದ ಹಿನ್ನೆಲೆಯುಳ್ಳವರ ಜೊತೆ ಶಾಸಕಿ ಅತಿಯಾದ ಆಪ್ತತೆ ಹೊಂದಿದ್ದಾರೆ ಎಂದು ನಿಯೋಗವು ದೂರಿದೆ. ಅಷ್ಟೇ ಅಲ್ಲದೆ, ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ 2025ರ ಮೂಡಿಗೆರೆ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಅದ್ದೂರಿ ಸ್ವಾಗತ ನೀಡಿ ವೇದಿಕೆ ಹಂಚಿಕೊಂಡಿದ್ದಾರೆ ಎನ್ನುವ ಅಂಶವನ್ನು ಉಲ್ಲೇಖಿಸಲಾಗಿದೆ.
ಕ್ಷೇತ್ರದ ಸಾಂಸ್ಥಿಕ ರಾಜಕಾರಣದಲ್ಲೂ ಶಾಸಕಿಯ ಏಕಪಕ್ಷೀಯ ಧೋರಣೆ ಮಿತಿಮೀರಿದ್ದು, ಗೆದ್ದು ಮೂರು ವರ್ಷಗಳಾಗುತ್ತಾ ಬಂದರೂ ಅವರು ಇಂದಿರಾಗಾಂಧಿ ಸ್ಮಾರಕ ಭವನದ ಮಾತೃ ಬ್ಲಾಕ್ ಕಚೇರಿಗೆ ಒಮ್ಮೆಯೂ ಭೇಟಿ ನೀಡಿಲ್ಲ. ತಾಲೂಕು ಕೇಂದ್ರದಿಂದ ದೂರವಿರುವ ತಮ್ಮ ನಿವಾಸದಲ್ಲಿ ಗೃಹ ಕಚೇರಿ ತೆರೆದಿರುವುದರಿಂದ ಸಾರ್ವಜನಿಕರಿಗೆ ಹಾಗೂ ಕಾರ್ಯಕರ್ತರಿಗೆ ಭೇಟಿ ಮಾಡಲು ತೀವ್ರ ಅನಾನುಕೂಲವಾಗುತ್ತಿದೆ. ಪಕ್ಷದ ಅಧಿಕೃತ ಸಭೆಗಳು, ರಾಷ್ಟ್ರೀಯ ಹಬ್ಬಗಳು ಅಥವಾ ಸಂತಾಪ ಸೂಚಕ ಸಭೆಗಳಿಂದ ದೂರ ಉಳಿಯುವ ಅವರು, ಕೆಪಿಸಿಸಿ ಸೂಚಿಸಿದ ಸಮನ್ವಯ ಸಮಿತಿಯನ್ನೂ ರಚಿಸದೆ ಪಕ್ಷದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಕೇವಲ ತಮ್ಮ ಹಿಂಬಾಲಕರ ಮೂಲಕವೇ ಹೋಬಳಿ ಅಧ್ಯಕ್ಷರ ನೇಮಕಾತಿ, ಅನುದಾನ ಹಂಚಿಕೆ, ವರ್ಗಾವಣೆ ಹಾಗೂ ಕಾಂಟ್ರಾಕ್ಟ್ ಲಾಬಿ ನಡೆಸುತ್ತಿದ್ದು, ಮುಂಚೂಣಿ ಘಟಕಗಳಿಗೆ ಯಾವುದೇ ಕಿಮ್ಮತ್ತು ನೀಡುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ವಾರದಲ್ಲಿ ಕೇವಲ ಎರಡು ದಿನ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವ ಶಾಸಕರನ್ನು ಭೇಟಿಯಾಗಲು ಕಾರ್ಯಕರ್ತರು ಬೆಂಗಳೂರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ತಕ್ಷಣವೇ ಒಂದು ವಿಶೇಷ ತಂಡವನ್ನು ರಚಿಸಿ, ಮೂಡಿಗೆರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ತುರ್ತು ಕ್ರಮ ಕೈಗೊಳ್ಳದಿದ್ದರೆ ಮುಂದಿನ 2028ರ ವಿಧಾನಸಭಾ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆಯಲ್ಲಿ ಪಕ್ಷ ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಎಚ್ಚರಿಸಿದೆ.