ಕಾಫಿನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ; ರಸ್ತೆ, ತೋಟಗಳಿಗೆ ನುಗ್ಗಿದ ನೀರು; ಜನಜೀವನ ಅಸ್ತವ್ಯಸ್ತ

Update: 2026-08-03 00:37 IST

ಚಿಕ್ಕಮಗಳೂರು : ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜೀವನದಿಯಾದ ತುಂಗಾನದಿ ಉಕ್ಕಿಹರಿದಿದೆ. ರಸ್ತೆ ಮತ್ತು ತೋಟಗಳಿಗೆ ನೀರು ನುಗ್ಗಿದೆ. ಅಲ್ಲಲ್ಲಿ ದರೆ ಮತ್ತು ತಡೆಗೋಡೆ ಕುಸಿದಿದೆ.

ಶೃಂಗೇರಿ ತಾಲೂಕಿನಾದ್ಯಂತ ಮುಂಗಾರು ಮಳೆ ಬಿರುಸುಗೊಂಡಿದ್ದು, ಕಳೆದ 24 ಗಂಟೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದೆ. ತುಂಗಾನದಿ ಉಕ್ಕಿಹರಿಯುತ್ತಿರುವುದರಿಂದ ರಸ್ತೆಗಳಿಗೆ ನೀರುನುಗ್ಗಿದ ಪರಿಣಾಮ ವಾಹನಗಳನ್ನು ಪಟ್ಟಣದ ರಸ್ತೆಯ ಇಕ್ಕೆಲಗಳಿಗೆ ನಿಲ್ಲಿಸಲಾಗಿದೆ.

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.ಶುಕ್ರವಾರ ಸಂಜೆಯಿಂದ ಜೋರಾಗಿದ್ದ ಮಳೆ, ರಾತ್ರಿ ಮತ್ತಷ್ಟು ಬಿರುಸು ಗೊಂಡಿದ್ದು, ಇದರಿಂದ ರಾತ್ರಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಪ್ರವಾಹದ ನೀರು ತುಂಬಿ ಸಂಚಾರ ಸ್ಥಗಿತಗೊಳಿಸಲಾಗಿದೆ.

ತುಂಗಾ ನದಿ ಪ್ರವಾಹದಿಂದ ತುಂಗಾ ನದಿ ದಡದಲ್ಲಿರುವ ಕಪ್ಪೆ ಶಂಕರ ಮಂಟಪ ಮುಳುಗಿದೆ.ವಿದ್ಯಾರಣ್ಯಪುರ ರಸ್ತೆ ಸಂಚಾರ ಬಂದ್ ಆಗಿದೆ. ಗುರುಭವನಕ್ಕೆ ಹೋಗುವ ರಸ್ತೆ ನೀರಿನಿಂದ ತುಂಬಿದೆ. ರಾಷ್ಟ್ರೀಯ ಹೆದ್ದಾರಿ 169 ತನಿಕೋಡು ಬಳಿ ಪ್ರವಾಹದ ನೀರು ರಸ್ತೆಗೆ ಬಂದಿದೆ. ಇದರಿಂದ ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು.

ಬೇಗಾರ್‌ನಲ್ಲಿ ದಾಖಲೆಯ 269 ಮಿ.ಮೀ. ಮಳೆಯಾಗಿದೆ. ತುಂಗಾ ನದಿಯ ಉಪ ನದಿಗಳಾದ ಮಾಲತಿ, ನಂದಿನಿ, ನಳಿನಿ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಮಾಲತಿ ನದಿಯ ಪ್ರವಾಹದಿಂದ ತಗ್ಗು ಪ್ರದೇಶದ ಭತ್ತದ ಗದ್ದೆ, ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಬೇಗಾರ್ ಸಮೀಪ ಹಳ್ಳದ ತಡೆಗೋಡೆ ಕೊಚ್ಚಿಹೋಗಿದೆ. ರಾಷ್ಟ್ರೀಯ ಹೆದ್ದಾರಿ 169ರ ಕಡೆಮನೆ ಬಳಿ ಬರೆ ಕುಸಿದು ಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿತ್ತು. ರಸ್ತೆಯಲ್ಲಿ ಭಾರೀ ಪ್ರಮಾಣದ ಕೆಸರು ಸಂಗ್ರಹವಾಗಿದ್ದು, ಸಂಕ್ಲಾಪುರದ ಬಳಿ ತೆಂಗಿನ ಮರ ರಸ್ತೆಗೆ ಬಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು. ಸಂಕ್ಲಾಪುರದಲ್ಲಿ ದರೆ ಕುಸಿದು ಮನೆಯೊಂದಕ್ಕೆ ಹಾನಿಯಾಗಿದೆ. ಕೆವಿಆರ್ ರಸ್ತೆಯಲ್ಲಿ ದರೆ ಕುಸಿದು ಕುಡಿಯುವ ನೀರಿನ ಬಾವಿಗೆ ಹಾನಿಯಾಗಿದೆ.

ಕೊಪ್ಪ: ಜಯಪುರ ಗ್ರಾಮ ಪಂಚಾಯತ್‌ನ ಹಲಗೇಶ್ವರ ಗಾಳಿಗಂಡಿಯಲ್ಲಿ ದಿನೇಶ್ ಎಂಬವರ ಮನೆಯ ಮೇಲೆ ದರೆ ಕುಸಿದು ಕೆಸರುನೀರು ಮನೆಯೊಳಗೆ ನುಗ್ಗಿದೆ. ಸುಮಾರು 10 ರಿಂದ 15 ಮನೆಗಳಿರುವ ಈ ಜಾಗದಲ್ಲಿ ಯಾವುದೇ ರೀತಿಯ ಭದ್ರತೆ ಇಲ್ಲದಿರುವುದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳು ಕೂಲಿ ಕಾರ್ಮಿಕರ ಬಗ್ಗೆ ಎಚ್ಚರವಹಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಳಸ: ತಾಲೂಕಿನ ಬೇಡಕ್ಕಿ ಸಮೀಪ ಮಳೆಯ ಅಬ್ಬರಕ್ಕೆ ತಡೆಗೋಡೆ ಕುಸಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಳಸ ಪಟ್ಟಣದ ಸರ್ವಿಸ್ ಸ್ಟೇಷನ್ - ಬೇಡಕ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಮುಹಮ್ಮದ್ ಎಂಬವರ ಮನೆಯ ತಡೆಗೋಡೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News