Chikkamagaluru | ಹಳೆ ದ್ವೇಷ ಕಾರಣ ವ್ಯಕ್ತಿಯ ಕೊಲೆ: ಮೃತದೇಹ ಹೂತು ಹಾಕಿ ಸಾಕ್ಷ್ಯ ನಾಶಕ್ಕೆ ಯತ್ನ
ಕಡೂರು, ಜು.27: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ, ಮೃತದೇಹವನ್ನು ಗುಂಡಿ ಅಗೆದು ಹೂತು ಹಾಕಿರುವ ಘಟನೆ ಕಡೂರು ತಾಲೂಕಿನ ಯಗಟಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಕರಿಯಪ್ಪ (47) ಕೊಲೆಯಾದ ವ್ಯಕ್ತಿ. ಈ ಸಂಬಂಧ ಮೃತರ ಪುತ್ರ ಅಭಿಷೇಕ್ ಡಿ.ಕೆ. ನೀಡಿದ ದೂರಿನನ್ವಯ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಜು.25ರಂದು ಕರಿಯಪ್ಪ ದನಗಳನ್ನು ಮೇಯಿಸಲು ತೆರಳಿದ್ದ ವೇಳೆ ಗ್ರಾಮದ ಕೆಂಚಪ್ಪ ಎಂಬಾತನೊಂದಿಗೆ ಗೋಮಾಳದಲ್ಲಿ ದನ ಮೇಯಿಸುವ ವಿಚಾರವಾಗಿ ಜಗಳ ನಡೆದಿತ್ತೆನ್ನಲಾಗಿದೆ. ಈ ವಿಚಾರವನ್ನು ಕರಿಯಪ್ಪ ಮನೆಯಲ್ಲಿ ತಿಳಿಸಿದ್ದರು.
ಅಂದು ರಾತ್ರಿ ಕರಿಯಪ್ಪ ಗ್ರಾಮದ ಬಾಲಾಜಿ ಕ್ಲಬ್ ಕಟ್ಟಡದಲ್ಲಿ ಮಲಗಲು ತೆರಳಿದ್ದು, ಮರುದಿನ ಬೆಳಗ್ಗೆಯಾದರೂ ಮನೆಗೆ ಮರಳಿರಲಿಲ್ಲ. ಕುಟುಂಬದವರು ಹುಡುಕಾಟ ನಡೆಸಿದಾಗ, ಸಿಸಿಟಿವಿ ದೃಶ್ಯಾವಳಿಯಲ್ಲಿ ಕರಿಯಪ್ಪ ಅವರು ಕೆಂಚಪ್ಪನ ಮನೆಯ ಕಡೆಗೆ ತೆರಳಿರುವುದು ಕಂಡುಬಂದಿದೆ.
ಗ್ರಾಮಸ್ಥರ ಸಹಾಯದಿಂದ ವಿಚಾರಣೆ ನಡೆಸಿದ ವೇಳೆ ಕೆಂಚಪ್ಪನ ಸಹೋದರ ಚಂದ್ರಪ್ಪ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಬಳಿಕ ಒತ್ತಾಯಿಸಿ ವಿಚಾರಿಸಿದಾಗ, ತಾನು ತನ್ನ ಅಣ್ಣ ಕೆಂಚಪ್ಪ, ಕೆಂಚಪ್ಪನ ಮಕ್ಕಳಾದ ಯದುವೀರ, ರಾಕೇಶ್ ಹಾಗೂ ಕೆಂಚಪ್ಪನ ಪತ್ನಿ ಹೇಮಾ ಅವರೊಂದಿಗೆ ಸೇರಿ ಹಳೆಯ ದ್ವೇಷದಿಂದ ಕರಿಯಪ್ಪನನ್ನು ಕೊಲೆ ಮಾಡಿ ಬಾವಿಸರ ಹಳ್ಳದ ಸಮೀಪ ಮಣ್ಣಿನಲ್ಲಿ ಹೂತು ಹಾಕಿರುವುದಾಗಿ ಹೇಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಳ್ಳದ ಬಳಿ ಮಣ್ಣಿನಲ್ಲಿ ಹೂತು ಹಾಕಿದ್ದ ಮೃತದೇಹ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 86/2026 ದಾಖಲಿಸಲಾಗಿದ್ದು, ಬಿಎನ್ ಎಸ್ ಕಲಂ 103(1), 238(a) ಹಾಗೂ 3(5) ಅಡಿಯಲ್ಲಿ ಕೆಂಚಪ್ಪ, ಚಂದ್ರಪ್ಪ, ಯದುವೀರ, ರಾಕೇಶ್ ಹಾಗೂ ಹೇಮಾ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.