ಸಿ.ಟಿ.ರವಿ ದ್ವೇಷ ಭಾಷಣ ಬಿಟ್ಟು ಅಭಿವೃದ್ಧಿಗೆ ಮುಂದಾಗಲಿ : ಸುಧೀರ್‌ಕುಮಾರ್ ಮುರೊಳ್ಳಿ

Update: 2026-08-01 23:40 IST

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ದ್ವೇಷ ಭಾಷಣಗಳನ್ನು ಮಾಡುವ ಮೂಲಕ ಸಮಾಜ ಒಡೆಯುವ ಬದಲು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಸುಧೀರ್‌ಕುಮಾರ್ ಮುರೊಳ್ಳಿ ಒತ್ತಾಯಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿಲ್ಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು, ಯುವಜನರು ನಡೆಸಿದ ಹೋರಾಟವನ್ನು ಶಂಕಿಸಿ ಮುಲ್ಲಾಗಳಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಅವರು ನಾಲಿಗೆಗೆ ಸುಸಂಸ್ಕೃತಿ ಕೊಡಬೇಕು. ಭಾಷೆಗೆ ಸುಸಂಸ್ಕೃತಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ವಿಪರೀತವಾದ ದ್ವೇಷ ಭಾಷಣಗಳ ಆಧಾರದಲ್ಲಿಯೇ ಸಂಘಟನೆಯನ್ನು ಕಟ್ಟಲು ಬಿಜೆಪಿ ಹೊರಟಂತೆ ಕಾಣುತ್ತಿದೆ. ಉಡುಪಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಶಾಸಕ ಯಶ್ಪಾಲ್ ಸುವರ್ಣ ಅವರು ‘ರಾಹುಲ್‌ಗಾಂಧಿ ವಂಶವನ್ನು ಧ್ವಂಸ ಮಾಡುವುದಾಗಿ’ ಹೇಳಿದ್ದಾರೆ. ವಿದ್ಯಾರ್ಥಿ ಯುವಜನರ ಹೋರಾಟವನ್ನು ಬೆಂಬಲಿಸಿದ ಚಿತ್ರನಟ ಪ್ರಕಾಶ್ ರೈ ಅವರನ್ನು ‘ಸಮುದ್ರದ ಮೀನುಗಳಿಗೆ ಆಹಾರ ಹಾಕುವುದಾಗಿ’ ಬೆದರಿಕೆ ಹಾಕಿದ್ದಾರೆ. ಇವರು ವಿ.ಎಸ್.ಆಚಾರ್ಯ ಅವರ ನಡವಳಿಕೆಯನ್ನು ಕಲಿಯಬೇಕಾಗಿದೆ ಎಂದು ತಿಳಿಸಿದರು.

ಶಾಸಕರ ಹೇಳಿಕೆ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ನೋಟಿಸ್ ನೀಡಲು ತೆರಳಿದ ಪೊಲೀಸ್ ಅಧಿಕಾರಿಯೊಬ್ಬರು ಸೆಲ್ಯೂಟ್ ಹೊಡೆದು ನೋಟೀಸ್ ನೀಡಿ ಬಂದಿದ್ದಾರೆ. ಪುಂಡರನ್ನು ಪೊಲೀಸರು ಪುಂಡರಾಗಿಯೇ ನೋಡಬೇಕಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್, ಮುಖಂಡರಾದ ರವೀಂದ್ರ, ಚಂದ್ರು, ಮಹೇಶ್ವರಪ್ಪ, ಮಂಜುನಾಥ, ದಶರಥ, ಎಚ್.ಸಿ.ಗಂಗಾಧರ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News